×
Ad

ಒಮನ್,ಯಮನ್‌ಗಳಲ್ಲಿ ಮೆಕುನು ಆರ್ಭಟ: ಚಂಡಮಾರುತದ ಹಾವಳಿಗೆ ಕನಿಷ್ಠ ಮೂವರು ಬಲಿ

Update: 2018-05-26 22:39 IST

ಸಲಾಲಾ,ಮೇ 26: ಅರೇಬಿಯ ಪ್ರಸ್ಥಭೂಮಿ ಪ್ರದೇಶಕ್ಕೆ ಶನಿವಾರ ಅಪ್ಪಳಿಸಿದ ಮೆಕುನು ಚಂಡಮಾರುತವು ಓಮನ್ ಹಾಗೂ ಯೆಮೆನ್‌ನಲ್ಲಿ ಭಾರೀ ನಾಶ,ನಷ್ಟವನ್ನುಂಟು ಮಾಡಿದೆ. ಚಂಡಮಾರುತದ ಆಟ್ಟಹಾಸಕ್ಕೆ ಕನಿಷ್ಠ ಮೂವರು ಬಲಿಯಾಗಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

 ಒಮನ್‌ನ ಮೂರನೆ ಅತಿ ದೊಡ್ಡ ಪಟ್ಟಣವಾದ ಸಲಾಲಾದ ಮೇಲೆ ಶನಿವಾರ ನಸುಕಿನಲ್ಲಿ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ ವಿವಿಧೆಡೆ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು.

ಚಂಡಮಾರುತದ ಅಪ್ಪಳಿಸುವ ಮುನ್ನವೇ ತೀರಪ್ರದೇಶದ ನಿವಾಸಿಗಳನ್ನು ಹಾಗೂ ವಿಲಾಸಿ ಹೊಟೇಲ್‌ಗಳಲ್ಲಿ ತಂಗಿದ್ದವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.

ಓಮನ್‌ನಲ್ಲಿ 12 ವರ್ಷದ ಬಾಲಕಿಯೊಬ್ಬಳು ಚಂಡಮಾರುತಕ್ಕೆ ಬಲಿಯಾಗಿದ್ದಾಳೆ. ಯಮೆನ್‌ನ ದ್ವೀಪವಾದ ಸೊಕೊತ್ರಾದ ಮೇಲೆ ಚಂಡಮಾರುತ ಅಪ್ಪಳಿಸಿದ ಆನಂತರ 40ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಯಮೆನ್ , ಸೂಡಾನ್ ಹಾಗೂ ಭಾರತೀಯ ಪ್ರಜೆಗಳೆಂದು ತಿಳಿದುಬಂದಿದೆ.

 ಮೆಕುನು ಚಂಡಮಾರುತವು ತಾಸಿಗೆ 170-180 ಕಿ.ಮೀ. ವೇಗದಲ್ಲಿ ಅರೇಬಿಯ ಪರ್ಯಾಯ ದ್ವೀಪದ ಮೇಲೆ ಅಪ್ಪಳಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆಯ ವರದಿ ಮಾಡಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಸಲಾಲಾ ಪಟ್ಟಣ ಹಾಗೂ ಸುತ್ತುಮುತ್ತಲಿನ ಪ್ರದೇಶಗಳಲ್ಲಿ 200 ಮಿ.ಮೀ. ಮಳೆ ಸುರಿಯಲಿದೆಯೆಂದು ಓಮನ್‌ನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಂಡಮಾರುತದ ಸಂತ್ರಸ್ತರಿಗೆ ನೆರವಾಗಲು ಸಲಾಲಾ ನಗರಾದ್ಯಂತ ಗಣನೀಯ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆಯೆಂದು ಸ್ಥಳೀಯಾಡಳಿತ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News