ದುಬೈಯ ಈ ಮಸೀದಿಯಲ್ಲಿ ಭಾರತದ ಕಂಞಿಗಾಗಿ ಸೇರುತ್ತಾರೆ ಸಾವಿರಾರು ಮಂದಿ

Update: 2018-05-28 16:07 GMT

ದುಬೈ, ಮೇ 28 : ಇಲ್ಲಿನ ದೇರಾದಲ್ಲಿರುವ ಕುವೈತಿ ಮಸೀದಿ ದುಬೈಯಲ್ಲಿರುವ ವಿಶ್ವದ ವಿವಿಧೆಡೆಯ ಜನರ ಪಾಲಿಗೆ ಫೇವರಿಟ್ ಇಫ್ತಾರ್ ಪಾಯಿಂಟ್. ಇದಕ್ಕೆ ಕಾರಣವೇನು ಗೊತ್ತೇ ? ಭಾರತದ ಗಂಜಿ ಅಥವಾ ಮುಸ್ಲಿಮರ ಮಾತಲ್ಲಿ ಹೇಳುವುದಾದರೆ ಕಂಞಿ ! 

ಭಾರತದ ವಿವಿಧೆಡೆ ಅದರಲ್ಲೂ ವಿಶೇಷವಾಗಿ ಕರ್ನಾಟಕ ಕರಾವಳಿಯ ಮುಸ್ಲಿಮರಿಗೆ ಇಫ್ತಾರ್ ಸಮಯದಲ್ಲಿ ಅತ್ಯಂತ ಅಚ್ಚುಮೆಚ್ಚಿನ ಆಹಾರವಾದ ಕಂಞಿ ಈ ಮಸೀದಿಯಲ್ಲಿ ಇಫ್ತಾರ್ ಗೆ ಲಭ್ಯವಿರುತ್ತದೆ. ಇದು ಇಲ್ಲಿ ಎಷ್ಟು ಜನಪ್ರಿಯವಾಗಿದೆಯೆಂದರೆ ಕೇವಲ ಇದಕ್ಕಾಗಿಯೇ ದುಬೈಯ ವಿವಿಧೆಡೆಗಳಿಂದ ಇಫ್ತಾರ್ ಮಾಡಲು ಈ ಮಸೀದಿಗೆ ಜನರು ದೊಡ್ಡ ಸಂಖ್ಯೆಯಲ್ಲಿ ಬಂದು ಸೇರುತ್ತಾರೆ. ಹಾಗೆ ಬರುವವರಲ್ಲಿ ಹೆಚ್ಚಿನವರು ಭಾರತೀಯರು ಎಂದು ನೀವು ಭಾವಿಸಿದ್ದರೆ ತಪ್ಪು. ಇಲ್ಲಿಗೆ ಬರುವವರಲ್ಲಿ ಬಹಳಷ್ಟು ಮಂದಿ ದುಬೈ ಯಲ್ಲಿ ನೆಲೆಸಿರುವ ವಿಶ್ವದ ವಿವಿಧೆಡೆಗಳ ಜನರು.  ಸುಮಾರು 6,000 ಮಂದಿ ಇಲ್ಲಿ ಇಫ್ತಾರ್ ಗಾಗಿ ಸೇರುತ್ತಾರೆ. ಅವರಲ್ಲಿ ಕಾರ್ಮಿಕರು, ಬೇರೆ ಬೇರೆ ಉದ್ಯೋಗಿಗಳು ಮಾತ್ರವಲ್ಲದೆ ಪ್ರವಾಸಿಗರು, ಉದ್ಯಮಿಗಳೂ ಇರುತ್ತಾರೆ. 

ಈ ದಕ್ಷಿಣ ಭಾರತದ ಖ್ಯಾತ ಆಹಾರ ಪದಾರ್ಥವನ್ನು ಕುವೈತಿ ಮಸೀದಿಯಲ್ಲಿ 42 ವರ್ಷಗಳ ಹಿಂದೆ ಇಫ್ತಾರ್ ಸಮಯದಲ್ಲಿ ನೀಡಲು ಪ್ರಾರಂಭಿಸಲಾಯಿತು. ಬಳಿಕ ಪ್ರತಿವರ್ಷ ಇದನ್ನು ಮುಂದುವರೆಸಿಕೊಂಡು ಬರಲಾಗಿದೆ. ಇಲ್ಲಿನ ಇಮಾನ್ ಕಲ್ಚರಲ್ ಸೆಂಟರ್ ನ ನೂರಕ್ಕೂ ಹೆಚ್ಚು ಕಾರ್ಯಕರ್ತರು ಇದಕ್ಕಾಗಿ ದುಡಿಯುತ್ತಾರೆ. ಈ ಗಂಜಿಯಲ್ಲಿ ಅಕ್ಕಿ , ತೆಂಗಿನಕಾಯಿ, ಮೆಂತೆ ಕಾಳು  ಮಾತ್ರವಲ್ಲದೆ ಮಾಂಸದ ತುಣುಕುಗಳನ್ನು ಭಾರತದ ಮಸಾಲೆ ಪದಾರ್ಥಗಳ ಜೊತೆ ಸೇರಿಸಿ ಅತ್ಯಂತ ರುಚಿಕರವಾಗಿ ತಯಾರಿಸಲಾಗುತ್ತದೆ. 

ಗಂಜಿ ತಿನ್ನಲು ನನಗೆ ಬಹಳ ಖುಷಿ. ನಮ್ಮ ದೇಶದಲ್ಲೂ ಇಂತಹ ಆಹಾರ ತಿನ್ನುತ್ತೇವೆ. ಹಾಗಾಗಿ ಇಲ್ಲಿಗೆ ಬಂದು ಇದನ್ನು ತಿನ್ನುವಾಗ ಮನೆಯ ಊಟ ಮಾಡಿದಂತೆ ಖುಷಿಯಾಗುತ್ತದೆ.  ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ ಎಂದು ಆಫ್ರಿಕಾದ ನೌಶಾದ್ ಅಬ್ದುಲ್ಲಾ ದಿ ನ್ಯಾಷನಲ್ ಪತ್ರಿಕೆಯ ಪ್ರತಿನಿಧಿ ಜೊತೆ ಮಾತನಾಡುತ್ತ ಹೇಳಿದ್ದಾರೆ. 

ಇಫ್ತಾರ್ ಗೆ ಒಂದು ಗಂಟೆ ಮೊದಲೇ ಜನರು ಬಂದು ಇಲ್ಲಿ ಸರತಿ ಸಾಲಿನಲ್ಲಿ ನಿಂತುಕೊಳ್ಳುತ್ತಾರೆ. ಇದರಲ್ಲಿ ಮುಸ್ಲಿಮರು ಮಾತ್ರವಲ್ಲದೆ ಎಲ್ಲ ಧರ್ಮೀಯರು ಇರುತ್ತಾರೆ. ಕೆಲವರು ಅಲ್ಲಿ ಬಂದು ಡಬ್ಬಗಳಲ್ಲಿ ನೀಡುವ ಗಂಜಿಯನ್ನು ತಾವಿರುವಲ್ಲಿಗೆ ತೆಗೆದುಕೊಂಡು ಹೋಗಿ ಸೇವಿಸುತ್ತಾರೆ. 

" ಇಲ್ಲಿ ಎಲ್ಲರಿಗೂ ಸ್ವಾಗತ. ಮುಸ್ಲಿಮರು , ಮುಸ್ಲಿಮೇತರರು, ಉಪವಾಸಿಗರು, ಉಪವಾಸ ಇಡದವರು ಎಂಬ ಭೇದ ಇಲ್ಲ. ಹಸಿವಾದವರು ಯಾರು ಬೇಕಾದರೂ ಇಲ್ಲಿ ಬರಬಹುದು " ಎಂದು ಹೇಳುತ್ತಾರೆ ಇಮಾನ್ ಕಲ್ಚರಲ್ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಹಮೀದ್ ಯಾಸಿನ್. 

ಕೃಪೆ: www.thenational.ae

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News