ಬ್ಯಾಂಕ್‌ಗೆ ವಂಚನೆ: ಅಬುಧಾಬಿಯಲ್ಲಿ ಭಾರತೀಯ ಸೇರಿ 28 ಮಂದಿಗೆ ಜೈಲು

Update: 2018-05-30 16:51 GMT

ಅಬುದಾಬಿ, ಮೇ30: ಬ್ಯಾಂಕ್‌ಗೆ 635 ದಿರ್ಹಂ ಹಣ ವಂಚಿಸಿದ ಆರೋಪದಲ್ಲಿ ಬುಧವಾರದಂದು ಅಬುಧಾಬಿಯ ಅಪರಾಧಿ ನ್ಯಾಯಾಲಯವು ಭಾರತೀಯನೂ ಸೇರಿದಂತೆ 28 ಮಂದಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಈ ಎಲ್ಲ ಆರೋಪಿಗಳು ಬೃಹತ್ ಮೊತ್ತದ ಅವ್ಯವಹಾರ ನಡೆಸಿದ ಮತ್ತು ವಂಚಕ ಚಟುವಟಿಕೆಗಳನ್ನು ನಡೆಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಎಲ್ಲರನ್ನೂ ಅಪರಾಧಿಗಳೆಂದು ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬ್ಯಾಂಕ್‌ಗೆ ಒಂಬತ್ತು ಮಿಲಿಯನ್ ದಿರ್ಹಂ ದಂಡ ಪಾವತಿಸುವಂತೆ ನ್ಯಾಯಾಲಯ ಆರೋಪಿಗಳಿಗೆ ಸೂಚಿಸಿದೆ. ಜೊತೆಗೆ ನ್ಯಾಯಾಲಯದ ಶುಲ್ಕದ ರೂಪದಲ್ಲಿ ಬ್ಯಾಂಕ್‌ಗೆ ಹೆಚ್ಚುವರಿ 21,000 ದಿರ್ಹಂ ಅನ್ನು ಪಾವತಿಸಲು ನ್ಯಾಯಾಲಯ ಆರೋಪಿಗಳಿಗೆ ಸೂಚಿಸಿದೆ.

ಅಮೆರಿಕ, ರಷ್ಯಾ,ಭಾರತ, ಕೆನಡಾ ಮತ್ತು ಪಾಕಿಸ್ತಾನದ ಪ್ರಜೆಗಳು ಭಾಗಿಯಾಗಿದ್ದ ಈ ಹಗರಣದಲ್ಲಿ ಬ್ಯಾಂಕ್‌ನ ಸಿಬ್ಬಂದಿ ಕೂಡಾ ಶಾಮೀಲಾಗಿದ್ದರು. ಇವರು ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸದೆ ಇದ್ದ ಖಾತೆಗಳಲ್ಲಿದ್ದ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿ ನಂತರ ಅದನ್ನು ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಮ್ಮ ದೂರಿನಲ್ಲಿ ತಿಳಿಸಿದ್ದರು.

ನ್ಯಾಯಾಲಯವು ಪ್ರಮುಖ ಎಂಟು ಆರೋಪಿಗಳಿಗೆ ಹದಿನೈದು ವರ್ಷಗಳ ಜೈಲುಶಿಕ್ಷೆ ವಿಧಿಸಿದ್ದರೆ ಒಂಬತ್ತು ಮಂದಿಗೆ ಏಳು ವರ್ಷ ಹಾಗೂ ಒಬ್ಬನಿಗೆ ಒಂದು ವರ್ಷ ಜೈಲುವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಜೈಲುಶಿಕ್ಷೆಯ ಅವಧಿ ಮುಗಿದ ನಂತರ ಹಾಗೂ ಅಪರಾಧಿಗಳು ದಂಡ ಪಾವತಿಸಿದ ನಂತರ ಅವರ ಸ್ವದೇಶಗಳಿಗೆ ಗಡಿಪಾರು ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News