ದುಬೈ: ಬಿಐಟಿ ಹಳೆ ವಿದ್ಯಾರ್ಥಿಗಳ ಸಂಘದಿಂದ ಇಫ್ತಾರ್ ಕೂಟ

Update: 2018-06-03 14:39 GMT

ದುಬೈ, ಜೂ.3: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ ಹಳೆ ವಿದ್ಯಾರ್ಥಿಗಳ ಸಂಘ ‘ಬಿಐಟಿಯನ್ ಅಲುಮ್ನಿ ಇಂಟರ್‌ನ್ಯಾಷನಲ್’ ವತಿಯಿಂದ ಶುಕ್ರವಾರ ಇಲ್ಲಿ  ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಿಐಟಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅವರು ಮಾತನಾಡಿ, ಬಿಐಟಿಯನ್‌ಗಳ ಉತ್ಸಾಹ ಮತ್ತು ಅವರು ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿರುವುದನ್ನು ಕಂಡು ತಾನು ವಿನಮ್ರನಾಗಿದ್ದೇನೆ ಮತ್ತು ಇದು ತನ್ನ ಪಾಲಿನ ಗೌರವವಾಗಿದೆ. ಬಿಐಟಿಯನ್‌ಗಳ ಪ್ರಾಮಾಣಿಕತೆ ಮತ್ತು ಬದ್ಧತೆಗಳನ್ನು ಪರಿಗಣಿಸಿದರೆ ಹಳೆ ವಿದ್ಯಾರ್ಥಿಗಳ ಚಟುವಟಿಕೆಗಳು ಎಲ್ಲ ಸದಸ್ಯರ ಬೆಳವಣಿಗೆಗೆ ಪೂರಕವಾಗಲಿವೆ ಎಂಬ ವಿಶ್ವಾಸ ತನಗಿದೆ ಎಂದು ಹೇಳಿದರು.

ಬಿಐಟಿಯನ್‌ಗಳು, ಬಿಐಟಿ ಮತ್ತು ಪ್ರಮುಖವಾಗಿ ಸಮುದಾಯಗಳ ಹಿತಕ್ಕಾಗಿ ಎಲ್ಲ ಸದಸ್ಯರು ಒಂದೇ ಕುಟುಂಬವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಗೌರವ ಅತಿಥಿಯಾಗಿದ್ದ ದುಬೈ ಹೆಲ್ತ್ ಅಥಾರಿಟೀಸ್‌ನ ಬಯೊಮೆಡಿಕಲ್ ವಿಭಾಗದ ಮುಖ್ಯಸ್ಥ ಇಂಜಿನಿಯರ್ ಮುಹಮ್ಮದ್ ಸಮೀರ್ ಅವರು ಹಳೆ ವಿದ್ಯಾರ್ಥಿ ಸಂಘದ ಮೂಲತತ್ತ್ವ, ಅದರ ವಿವಿಧ ಲಾಭಗಳ ಬಗ್ಗೆ ಮಾತನಾಡಿದರಲ್ಲದೆ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ್ದಕ್ಕೆ ಬಿಐಟಿಯನ್‌ಗಳನ್ನು ಅಭಿನಂದಿಸಿದರು.

ಸ್ಥಾಪಕ ಪ್ರಾಂಶುಪಾಲ ಮತ್ತು ಹಿರಿಯ ಸಲಹೆಗಾರ ಡಾ. ರಾಯ್ಕರ ಅವರು ಹಳೆ ವಿದ್ಯಾರ್ಥಿ ಸಂಘದ ಅವಶ್ಯಕತೆಯ ಕುರಿತು ಮಾತನಾಡಿದರೆ, ಇನ್ನೋರ್ವ ಅತಿಥಿ ದುಬೈನ ಎಂಜಿಪಿ ಶಿಪ್ಪಿಂಗ್ ವರ್ಲ್ಡ್‌ನ ಎಂಡಿ ಅಬ್ದುಲ್ ಶಾಫಿ ಅವರು, ಹಳೆ ವಿದ್ಯಾರ್ಥಿ ಸಂಘದ ಅಭಿವೃದ್ಧಿ ಪರ ಚಟುವಟಿಕೆಗಳಿಗೆ ನೆರವು ಮತ್ತು ಬೆಂಬಲ ನೀಡಲು ತಾನು ಸಿದ್ಧವಿರುವುದಾಗಿ ತಿಳಿಸಿದರು.

ಬಿಐಟಿಯನ್‌ಗಳಾದ ಆಕಾಶ ಶೆಟ್ಟಿ, ಮುಹಮ್ಮದ್ ಮುನೀಮ್, ಅಬೂಬಕರ್ ಸಿದ್ದಿಕಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಜುಮಾನಾ ಸ್ವಾಗತಿಸಿದರು. ಬಿಐಟಿ ಅಲುಮ್ನಿ ಇಂಟರ್‌ನ್ಯಾಷನಲ್‌ನ ಅಧ್ಯಕ್ಷ ಮುಹಮ್ಮದ್ ಅಫ್ಝಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ನಿಹಾಲ್ ವಂದಿಸಿದರು. ಮುಬಾಸ್ಸಿರ್ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಬಿಐಟಿಯನ್‌ಗಳು ಮತ್ತು ಅವರ ಕುಟುಂಬಗಳು ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News