ದುಬೈ: ಪ್ರತಿ ದಿನ 12,000 ಕಾರ್ಮಿಕರಿಗೆ ಊಟ ವಿತರಿಸುವ ‘ಎಂಎಸ್ ಎಸ್’

Update: 2018-06-13 17:05 GMT

ದುಬೈ, ಜೂ. 13: ಸಮರ್ಪಣಾ ಮನೋಭಾವದ 200 ಸ್ವಯಂಸೇವಕರ ಸಾಮಾಜಿಕ ಸೇವಾ ಗುಂಪು ‘ಮೋಡೆಲ್ ಸರ್ವಿಸ್ ಸೊಸೈಟಿ’ (ಎಂಎಸ್‌ಎಸ್)ಯಿಂದಾಗಿ ರಮಝಾನ್ ತಿಂಗಳಿನಲ್ಲಿ 12,000 ಕಾರ್ಮಿಕರು ತಾಜಾ ಊಟ ಮತ್ತು ಹಣ್ಣುಗಳನ್ನು ಪ್ರತಿ ದಿನ ಸೇವಿಸುವಂತಾಗಿದೆ.

22 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಈ ಸಾಮಾಜಿಕ ಸೇವಾ ಗುಂಪು ಮೇ 16ರಿಂದ ದುಬೈ ಮತ್ತು ಶಾರ್ಜಾಗಳಲ್ಲಿರುವ ಕಾರ್ಮಿಕರಿಗೆ 3 ಲಕ್ಷಕ್ಕೂ ಅಧಿಕ ಇಫ್ತಾರ್ ಊಟಗಳನ್ನು ನೀಡಿದೆ.

ಈ ಸಂಘಟನೆಯು ಪ್ರತಿ ದಿನ ಕಾರ್ಮಿಕರಿಗೆ 12,000 ಇಫ್ತಾರ್ ಊಟಗಳನ್ನು ನೀಡುತ್ತಿದೆ. ಕಳೆದ ವರ್ಷ, ಸೊಸೈಟಿಯು ಪ್ರತಿ ದಿನ 10,000 ಊಟಗಳನ್ನು ವಿತರಿಸಿತ್ತು.

‘‘ಈ ವರ್ಷ ನಾವು ಪ್ರತಿ ದಿನ 12,000 ಊಟಗಳನ್ನು ವಿತರಿಸುವ ಮೂಲಕ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಿದ್ದೇವೆ’’ ಎಂದು ಸೊಸೈಟಿಯ ಪ್ರಧಾನ ಕಾರ್ಯದರ್ಶಿ ರಶೀದ್ ಅಬ್ದು ‘ಖಲೀಜ್ ಟೈಮ್ಸ್’ಗೆ ಹೇಳಿದರು.

‘‘ರಮಝಾನ್ ತಿಂಗಳ ಕೊನೆಯ ವೇಳೆಗೆ, ನಾವು ಒಟ್ಟು 3,60,000 ಊಟಗಳನ್ನು ವಿತರಿಸುತ್ತೇವೆ’’ ಎಂದು ಅವರು ತಿಳಿಸಿದರು.

ಶಾರ್ಜಾ ಮತ್ತು ದುಬೈಗಳಲ್ಲಿರುವ ಸಾರ್ವಜನಿಕ ಅಡುಗೆ ಕೋಣೆಗಳಲ್ಲಿ ತಾಜಾ ಆಹಾರವನ್ನು ತಯಾರಿಸಲಾಗುತ್ತದೆ ಎಂದು ಸೊಸೈಟಿಯ ಅಧ್ಯಕ್ಷ ಯಾಕೂಬ್ ಹಸನ್ ಹೇಳುತ್ತಾರೆ.

ಜೆಬೆಲ್ ಅಲಿ ಮತ್ತು ಸೋನಾಪುರದಲ್ಲಿ ಒಟ್ಟು 5,500 ಹಾಗೂ ಅಲ್ ಸಜ್ಜಾ ಮತ್ತು ಶಾರ್ಜಾಗಳಲ್ಲಿ 6,500 ಊಟಗಳನ್ನು ವಿತರಿಸಲಾಗುತ್ತಿದೆ ಎಂದು ಸೊಸೈಟಿಯ ಸ್ವಯಂಸೇವಕರು ಹೇಳುತ್ತಾರೆ.

ಪೊಟ್ಟಣದ ಆಹಾರ ಕೊಡುವುದಿಲ್ಲ

 ‘‘ನಮ್ಮ ಅತಿಥಿಗಳಿಗೆ ಪೊಟ್ಟಣದ ಆಹಾರ ನೀಡುವುದನ್ನು ನಾವು ಇಷ್ಟಪಡುವುದಿಲ್ಲ. ಪ್ರತಿ ದಿನ 12,000 ಜನರಿಗೆ ಬಿಸಿ ಊಟ ಮತ್ತು ಆಗಷ್ಟೇ ಕತ್ತರಿಸಿದ ಹಣ್ಣುಗಳನ್ನು ನಾವು ವಿತರಿಸುತ್ತೇವೆ. ಇದನ್ನು ಕಾರ್ಯಗತಗೊಳಿಸುವುದು ಕಷ್ಟ ಸಾಧ್ಯ ಎನ್ನುವುದು ನಮಗೆ ಗೊತ್ತಿದೆ’’ ಎಂದು ಸೊಸೈಟಿಯ ಇಫ್ತಾರ್ ಕಾರ್ಯದರ್ಶಿ ಶಾಜಿಲ್ ಶೌಕತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News