ಯುಎಇ: ನೂತನ ಉದ್ಯೋಗ, ವೀಸಾ ನೀತಿ ಘೋಷಣೆ

Update: 2018-06-14 17:57 GMT

ದುಬೈ, ಜೂ. 14: ಯುಎಇ ಉಪಾಧ್ಯಕ್ಷ, ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ನೇತೃತ್ವದ ಸಚಿವ ಸಂಪುಟವು, ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ವಿದೇಶಿಯರ ವಿಮೆ ಮತ್ತು ವೀಸಾ ನಿಯಮಗಳಿಗೆ ಸಂಬಂಧಿಸಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.

 ಕೆಲಸಗಾರರ ಖಾತರಿಗಳಿಗೆ ಸಂಬಂಧಿಸಿದ ನೂತನ ವಿಮಾ ಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ. ನೂತನ ಯೋಜನೆಯ ಪ್ರಕಾರ, ಹಿಂದೆ ಪ್ರತಿಯೊಬ್ಬ ಕೆಲಸಗಾರನಿಗಾಗಿ ಕಡ್ಡಾಯವಾಗಿ ಠೇವಣಿ ಇರಿಸಬೇಕಾಗಿದ್ದ 3,000 ದಿರ್ಹಮ್ (ಸುಮಾರು 55,000 ರೂಪಾಯಿ) ಬದಲಿಗೆ ಪ್ರತಿ ವರ್ಷ 60 ದಿರ್ಹಮ್ (1105 ರೂಪಾಯಿ) ವೆಚ್ಚ ತಗಲುವ ವಿಮೆಯನ್ನು ತರಲಾಗಿದೆ.

 ನೂತನ ವಿಮಾ ಯೋಜನೆಯು ಖಾಸಗಿ ಕ್ಷೇತ್ರದ ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸುತ್ತದೆ ಹಾಗೂ ಉದ್ಯೋಗದಾತರ ಮೇಲಿನ ಹೊರೆಯನ್ನು ಕಡಿಮೆಗೊಳಿಸುತ್ತದೆ. ಇದರ ಪ್ರಕಾರ, ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಖಾತರಿಯಾಗಿ ಈವರೆಗೆ ಇರಿಸಿರುವ ಸುಮಾರು 14 ಬಿಲಿಯ ದಿರ್ಹಮ್ (ಸುಮಾರು 25,800 ಕೋಟಿ ರೂಪಾಯಿ) ಠೇವಣಿಯನ್ನು ಹಿಂದಕ್ಕೆ ಪಡೆಯಬಹುದಾಗಿದೆ ಹಾಗೂ ಅದನ್ನು ತಮ್ಮ ವ್ಯಾಪಾರದಲ್ಲಿ ಹೊಸದಾಗಿ ಹೂಡಬಹುದಾಗಿದೆ.

ನೂತನ ವ್ಯವಸ್ಥೆಯು ಯುಎಇಯಲ್ಲಿ ವ್ಯಾಪಾರ ಮಾಡುವುದನ್ನು ಸುಲಭಗೊಳಿಸುತ್ತದೆ ಹಾಗೂ ಇದರ ಪರಿಣಾಮ ಮಾರುಕಟ್ಟೆ ಸಮೃದ್ಧಿ ಮತ್ತು ಬೆಳವಣಿಗೆಯ ಮೇಲೆ ಆಗುತ್ತದೆ.

ಕೆಲಸಗಾರರಿಗೆ ಹೆಚ್ಚಿನ ಪ್ರಮಾಣದ ಹಕ್ಕುಗಳು ಮತ್ತು ಸೌಲಭ್ಯಗಳು ಸಿಗುವಂತೆ ನೂತನ ವ್ಯವಸ್ಥೆಯು ಖಾತರಿಪಡಿಸುತ್ತದೆ.

ವಾಸ್ತವ್ಯ ವೀಸಾ 2 ವರ್ಷ ವಿಸ್ತರಣೆ

ಪ್ರವಾಸಿಗರು, ನಿವಾಸಿಗಳು, ಕಟುಂಬಗಳು ಮತ್ತು ತಮ್ಮ ವೀಸಾ ಅವಧಿ ಮೀರಿ ವಾಸಿಸುತ್ತಿರುವ ಜನರಿಗಾಗಿ ಯುಎಇ ಸಚಿವ ಸಂಪುಟವು ನೂತನ ವೀಸಾ ನಿಯಮಗಳನ್ನು ಜಾರಿಗೆ ತಂದಿದೆ.

ಇದರ ಪ್ರಕಾರ, ಹೆತ್ತವರನ್ನು ಆಶ್ರಯಿಸಿರುವ ಮಕ್ಕಳು ತಮ್ಮ ಯನಿವರ್ಸಿಟಿ ಕಲಿಕೆ ಮುಗಿಸಿದ ಬಳಿಕ ಅವರ ವಾಸ್ತವ್ಯ ವೀಸಾವನ್ನು ಎರಡು ವರ್ಷಗಳಿಗೆ ವಿಸ್ತರಿಸಲು ಪ್ರಸ್ತಾಪಕ್ಕೆ ಸಚಿವ ಸಂಪುಟ ಅಂಗೀಕಾರ ನೀಡಿದೆ.

ನೌಕರರಿಗೆ ವಿಮಾ ಸೌಲಭ್ಯ

ನೂತನ ವ್ಯವಸ್ಥೆಯಲ್ಲಿ ಜಾರಿಗೆ ಬಂದಿರುವ ವಿಮಾ ಪಾಲಿಸಿಯ ಮೌಲ್ಯ ಪ್ರತಿ ನೌಕರರಿಗೆ ಪ್ರತಿ ವರ್ಷಕ್ಕೆ 60 ದಿರ್ಹಮ್ (1105 ರೂಪಾಯಿ).

ಸೇವಾವಧಿ ಕೊನೆಯಾಗುವಾಗ ಸಿಗುವ ಸೌಲಭ್ಯಗಳು, ರಜೆ ಭತ್ತೆ, ಓವರ್‌ಟೈಮ್ ಭತ್ತೆ, ಪಾವತಿಯಾಗದ ವೇತನ, ನೌಕರರ ವಾಪಸಾತಿ ಟಿಕೆಟ್ ಮತ್ತು ಕೆಲಸ ಮಾಡುವಾಗ ಸಂಭವಿಸುವ ಗಾಯಗಳ ಚಿಕಿತ್ಸೆಯ ವೆಚ್ಚ ಮುಂತಾದುವುಗಳು ಈ ವಿಮೆಯ ವ್ಯಾಪ್ತಿಗೆ ಬರುತ್ತವೆ.

ಗಾಯಗಳಿಗೆ ಚಿಕಿತ್ಸೆ ವೆಚ್ಚವಾಗಿ ಪ್ರತಿ ನೌಕರರಿಗೆ 20,000 ದಿರ್ಹಮ್ (ಸುಮಾರು 3.68 ಲಕ್ಷ ರೂಪಾಯಿ) ನಿಗದಿಪಡಿಸಲಾಗಿದೆ.

ಇತರ ಮುಖ್ಯಾಂಶಗಳು

►ಟ್ರಾನ್ಸಿಟ್ ಪ್ರಯಾಣಿಕರಿಗೆ (ಹೋಗ ಬೇಕಾದ ಸ್ಥಳ ತಲುಪುವ ಮುನ್ನ ವಿಮಾನ ಬದಲಿಸುವುದಕ್ಕಾಗಿ ಬೇರೊಂದು ದೇಶದ ವಿಮಾನ ನಿಲ್ದಾಣದಲ್ಲಿ ಇಳಿಯುವವರು) ಮೊದಲ 48 ಗಂಟೆಗಳ ಕಾಲ ಸಂಪೂರ್ಣ ಪ್ರವೇಶ ಶುಲ್ಕದಿಂದ ವಿನಾಯಿತಿ. ಟ್ರಾನ್ಸಿಟ್ ವೀಸಾವನ್ನು 50 ದಿರ್ಹಮ್ (920 ರೂಪಾಯಿ) ಪಾವತಿಸಿ 96 ಗಂಟೆಗಳವರೆಗೆ ವಿಸ್ತರಿಸಬಹುದಾಗಿದೆ.

►ವೀಸಾ ಅವಧಿ ಮೀರಿ ಯುಎಇಯಲ್ಲಿ ವಾಸಿಸುತ್ತಿರುವವರಿಗೆ ಪಾಸ್‌ಪೋರ್ಟ್‌ನಲ್ಲಿ ‘ನೋ ಎಂಟ್ರಿ’ ಮುದ್ರೆಯಿಲ್ಲದೆ ಸ್ವಯಂಪ್ರೇರಿತವಾಗಿ ದೇಶ ತೊರೆಯಲು ಒಂದು ಅವಕಾಶ ನೀಡಲಾಗಿದೆ.

►ಯುಎಇಯಲ್ಲಿ ಕೆಲಸ ಹುಡುಕುತ್ತಿರುವವರ ವೀಸಾ ಅವಧಿ ಮುಗಿದಿದ್ದರೆ ಹಾಗೂ ದೇಶದಲ್ಲಿ ಕೆಲಸ ಮಾಡಲು ಬಯಸಿದರೆ, ಅಂಥವರಿಗಾಗಿ ಹೊಸದಾಗಿ 6 ತಿಂಗಳ ವೀಸಾವನ್ನು ಪರಿಚಯಿಸಲಾಗುವುದು.

►ಯುಇಎಗೆ ಅಕ್ರಮ ಪ್ರವೇಶ ಮಾಡಿರುವ ವ್ಯಕ್ತಿಗಳು, ಪಾಸ್‌ಪೋರ್ಟ್‌ನಲ್ಲಿ ‘ನೋ ಎಂಟ್ರಿ’ ಮುದ್ರೆಯಿಲ್ಲದೆ ಎರಡು ವರ್ಷಗಳ ಕಾಲ ಸ್ವಯಂಪ್ರೇರಿತವಾಗಿ ದೇಶ ತೊರೆಯಲು ಒಂದು ಅವಕಾಶ ನೀಡಲಾಗುವುದು. ಇದಕ್ಕಾಗಿ ಅವರು ಚಾಲ್ತಿಯಲ್ಲಿರುವ ವಾಪಸಾತಿ ಟಿಕೆಟನ್ನು ತೋರಿಸಬೇಕಾಗುತ್ತದೆ.

►ತಮ್ಮ ವೀಸಾಗಳನ್ನು ನವೀಕರಿಸಬಯಸುವವರು ಇನ್ನು ತಮ್ಮ ಸ್ವದೇಶಕ್ಕೆ ವಾಪಸಾಗಿ ಮತ್ತೆ ಯುಎಇಗೆ ಮರು ಪ್ರವೇಶ ಮಾಡಬೇಕಾಗಿಲ್ಲ. ಅವರು ನಿರ್ದಿಷ್ಟ ಶುಲ್ಕ ಪಾವತಿಸಿ ಯುಎಇಯಲ್ಲೇ ನವೀಕರಿಸಬಹುದಾಗಿದೆ. ಈ ಮೂಲಕ ಹಣ ಮತ್ತು ಸಮಯವನ್ನು ಅವರು ಉಳಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News