ಸೌದಿ: 3 ತಿಂಗಳು ಮಧ್ಯಾಹ್ನ ಕೆಲಸ ನಿಷೇಧ ಜಾರಿಗೆ

Update: 2018-06-16 18:13 GMT

ರಿಯಾದ್, ಜೂ. 16: ಸೌದಿ ಅರೇಬಿಯದಲ್ಲಿ ಮಧ್ಯಾಹ್ನ ಕೆಲಸ ಮಾಡುವುದರ ಮೇಲಿನ ನಿಷೇಧ ಜೂನ್ 15 (ಶುಕ್ರವಾರ)ರಿಂದ ಜಾರಿಗೆ ಬಂದಿದೆ.

ಸೆಪ್ಟಂಬರ್ 15ರ ವರೆಗೆ, ಅಂದರೆ ಇನ್ನು 3 ತಿಂಗಳು ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಕೆಲಸ ಮಾಡಲು ಯಾರಿಗೂ ಅವಕಾಶ ನೀಡಬಾರದು ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ವಕ್ತಾರ ಖಾಲಿದ್ ಅಬಲ್ ಖೈಲ್ ಹೇಳಿದ್ದಾರೆ.

ಈ ಅವಧಿಯಲ್ಲಿ 3 ಗಂಟೆಗಳ ಕಾಲ ತಮ್ಮ ಕಾರ್ಮಿಕರು ಬಿಸಿಲಿನಲ್ಲಿ ಕೆಲಸ ಮಾಡದಂತೆ ಉದ್ಯೋಗದಾತರು ನೋಡಿಕೊಳ್ಳಬೇಕು ಎಂದು ವಕ್ತಾರರು ಹೇಳಿದ್ದಾರೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಪ್ರತಿ ವರ್ಷ ಜೂನ್ 15ರಿಂದ ಸೆಪ್ಟಂಬರ್ 15ರವರೆಗೆ ಕಾರ್ಮಿಕರು ಬಿರುಬಿಸಿಲಿನಲ್ಲಿ ಕೆಲಸ ಮಾಡುವುದನ್ನು ತಡೆಯುವುದಕ್ಕೆ ಸಂಬಂಧಿಸಿದ ಕಾನೂನನ್ನು ಸೌದಿ ಸಚಿವ ಸಂಪುಟ ಇತ್ತೀಚೆಗೆ ಅಂಗೀಕರಿಸಿದೆ.

ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಚಿವಾಲಯವು ಎಲ್ಲ ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಸಂಸ್ಥೆಗಳಿಗೆ ಸೂಚನೆಗಳನ್ನು ಕಳುಹಿಸಿದೆ.

ಸಹಿಸಿಕೊಳ್ಳಬಹುದಾದ ಉಷ್ಣತೆ ಇರುವ ಪ್ರದೇಶಗಳಿಗೆ ಈ ಕಾನೂನಿನಿಂದ ವಿನಾಯಿತಿ ನೀಡಲಾಗುವುದಿಲ್ಲ ಎಂದು ಅಬಲ್ ಖೈಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News