ಹುದೈದಾ ವಿಮಾನ ನಿಲ್ದಾಣ ವಶಪಡಿಸಿಕೊಂಡ ಯಮನ್ ಮಿತ್ರಕೂಟ

Update: 2018-06-16 18:23 GMT

ಏಡನ್, ಜೂ. 16: ಯಮನ್‌ನ ಪ್ರಮುಖ ಬಂದರು ನಗರ ಹುದೈದಾದಲ್ಲಿರುವ ವಿಮಾನ ನಿಲ್ದಾಣವನ್ನು ಅರಬ್ ಮಿತ್ರಕೂಟ ಬೆಂಬಲಿತ ಯಮನ್ ಪಡೆಗಳು ಪ್ರವೇಶಿಸಿವೆ ಎಂದು ಯಮನ್ ಸೇನೆ ತಿಳಿಸಿದೆ.

ಇರಾನ್ ಬೆಂಬಲಿತ ಹೌದಿ ಬಂಡುಕೋರರ ವಿರುದ್ಧ ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ಬೆಂಬಲಿತ ಯಮನಿ ಪಡೆಗಳು ಗಳಿಸಿದ ಮಹತ್ವದ ಮುನ್ನಡೆ ಇದಾಗಿದೆ.

ಮೂರು ವರ್ಷಗಳ ಹಿಂದೆ ಸಂಘರ್ಷ ಸ್ಫೋಟಿಸಿದಂದಿನಿಂದ ಆಯಕಟ್ಟಿನ ಹುದೈದಾ ನಗರದ ಹಿಡಿತ ಮೊದಲ ಬಾರಿಗೆ ಬಂಡುಕೋರರ ಕೈಯಿಂದ ನಿಧಾನವಾಗಿ ಜಾರುತ್ತಿದೆ.

‘‘ಅರಬ್ ಮಿತ್ರಕೂಟ ಬೆಂಬಲಿತ ಸೇನಾ ಪಡೆಗಳು ಹುದೈದಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೌದಿ ಬಂಡುಕೋರರ ಮುಷ್ಟಿಯಿಂದ ಮುಕ್ತಗೊಳಿಸಿವೆ’’ ಎಂದು ಯಮನ್ ಸೇನೆಯ ಮಾಧ್ಯಮ ಕಚೇರಿ ಶನಿವಾರ ಟ್ವಿಟರ್‌ನಲ್ಲಿ ತಿಳಿಸಿದೆ.

ಸರಕಾರಿ ಪಡೆಗಳು ವಿಮಾನ ನಿಲ್ದಾಣದ ಅವರಣವನ್ನು ಸುತ್ತುವರಿದಿವೆ, ಆದರೆ ಅದನ್ನು ವಶಪಡಿಸಿಕೊಂಡಿಲ್ಲ ಎಂದು ಯಮನ್ ಸೇನಾ ಮೂಲವೊಂದು ತಿಳಿಸಿದೆ.

ಸುತ್ತಮುತ್ತಲಿನ ಪ್ರದೇಶದಲ್ಲಿರುವ ನೆಲಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸವನ್ನು ಯಮನ್ ಸೇನೆಯ ತಾಂತ್ರಿಕ ಪಡೆ ನಿರ್ವಹಿಸುತ್ತಿದೆ.

ಯಮನ್‌ನಲ್ಲಿ ಹಸಿವೆಯಿಂದ ಬಳಲುತ್ತಿರುವ ಲಕ್ಷಾಂತರ ಜನರ ಸಂಕಷ್ಟವನ್ನು ಕೊನೆಗೊಳಿಸುವ ಉದ್ದೇಶದಿಂದ ಆಯಕಟ್ಟಿನ ಬಂದರು ನಗರ ಹುದೈದಾವನ್ನು ವಶಪಡಿಸಿಕೊಳ್ಳುವ ಸೇನಾ ಕಾರ್ಯಾಚಣೆಯನ್ನು ಮಿತ್ರಕೂಟ ಬೆಂಬಲಿತ ಯಮನ್ ಸೇನೆ ನಾಲ್ಕು ದಿನಗಳ ಹಿಂದೆ ಆರಂಭಿಸಿರುವುದನ್ನು ಸ್ಮರಿಸಬಹುದಾಗಿದೆ.

ಕೆಎಸ್‌ರಿಲೀಫ್‌ನಿಂದ ಹುದೈದಾದಲ್ಲಿ ನೆರವು ವಿತರಣೆ

ಯಮನ್‌ನ ಪಶ್ಚಿಮದ ಪ್ರಾಂತ ಹುದೈದಾದ ಅಲ್-ಖೋಖದಲ್ಲಿ ಆಂತರಿಕವಾಗಿ ನಿರ್ವಸಿತರಾಗಿರುವ ಜನರಿಗಾಗಿ ಸ್ಥಾಪಿಸಲಾಗಿರುವ ಶಿಬಿರದಲ್ಲಿರುವ 360 ಯಮನ್ ನಾಗರಿಕರಿಗೆ ಕಿಂಗ್ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್) ಆಹಾರ ಚೀಲಗಳನ್ನು ವಿತರಿಸಿದೆ.

ಈ ಪ್ರಾಂತದಲ್ಲಿ ವಿತರಣೆಗಾಗಿ ಕೆಎಸ್‌ರಿಲೀಫ್ 22,273 ಆಹಾರ ಚೀಲಗಳನ್ನು ನಿಗದಿಪಡಿಸಿದೆ. ಈ ನೆರವು ಯಮನಿಗರಿಗಾಗಿ ಸೌದಿ ಅರೇಬಿಯ ರೂಪಿಸಿರುವ 262 ಮಾನವೀಯ ನೆರವು ಯೋಜನೆಗಳ ಒಂದು ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News