ಸೌದಿ ಫುಟ್ಬಾಲ್ ಆಟಗಾರರನ್ನು ಒಯ್ಯುತ್ತಿದ್ದ ವಿಮಾನಕ್ಕೆ ಬೆಂಕಿ

Update: 2018-06-19 16:08 GMT

ರಿಯಾದ್, ಜೂ. 19: ವಿಶ್ವಕಪ್ ಪಂದ್ಯಕ್ಕಾಗಿ ಸೌದಿ ಅರೇಬಿಯ ರಾಷ್ಟ್ರೀಯ ತಂಡದ ಆಟಗಾರರನ್ನು ಸೋಮವಾರ ಸಂಜೆ ಕರೆದೊಯ್ಯುತ್ತಿದ್ದ ವಿಮಾನದ ಇಂಜಿನ್‌ಗೆ ಬೆಂಕಿ ಹತ್ತಿದ್ದು, ವಿಮಾನವು ರಶ್ಯದ ರೊಸ್ತೊವ್-ಆನ್-ಡಾನ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ.

ಭೂಸ್ಪರ್ಶದ ವೇಳೆ ಒಂದು ಇಂಜಿನ್‌ನಲ್ಲಿ ಬೆಂಕಿ ಇತ್ತು ಹಾಗೂ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರಶ್ಯದ ವಿಮಾನಯಾನ ನಿಯಂತ್ರಣ ಸಂಸ್ಥೆ ‘ರೊಸವಿಯಟ್‌ಸ್ಯ’ ಹೇಳಿದೆ ಎಂದು ‘ಇಂಟರ್‌ಫ್ಯಾಕ್ಸ್’ ವರದಿ ಮಾಡಿದೆ.

ಆದರೆ, ವಿಮಾನದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವರದಿಗಳನ್ನು ವಿಮಾನಯಾನ ಸಂಸ್ಥೆ ‘ರೋಸಿಯ’ ನಿರಾಕರಿಸಿದೆ. ಹಕ್ಕಿಬಡಿತದಿಂದಾಗಿ ಸಮಸ್ಯೆ ಸಂಭವಿಸಿದೆ ಎಂದು ಅದು ಹೇಳಿದೆ.

ಸೌದಿ ಅರೇಬಿಯ ಫುಟ್ಬಾಲ್ ತಂಡವು ರೋಸಿಯ ಏರ್‌ಬಸ್ ಎ319 ವಿಮಾನದಲ್ಲಿ ಸೇಂಟ್ ಪೀಟರ್ಸ್‌ಬರ್ಗ್‌ನಿಂದ ರೊಸ್ತೊವ್-ಆನ್-ಡಾನ್‌ಗೆ ಪ್ರಯಾಣಿಸುತ್ತಿತ್ತು. ರೊಸ್ತೊವ್-ಆನ್-ಡಾನ್‌ನಲ್ಲಿ ಸೌದಿ ಅರೇಬಿಯವು ಬುಧವಾರ ಉರುಗ್ವೆ ವಿರುದ್ಧ ‘ಎ’ ಗುಂಪಿನ ಎರಡನೇ ಪಂದ್ಯವನ್ನು ಆಡಲಿದೆ.

ವಿಮಾನವು ಭೂಸ್ಪರ್ಶ ನಡೆಸುತ್ತಿದ್ದಾಗ ವಿಮಾನದ ಒಂದು ಇಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿತು ಎಂದು ರೋಸಿಯ ಏರ್‌ಲೈನ್ಸ್ ವಕ್ತಾರರೊಬ್ಬರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಇಂಜಿನ್‌ನಲ್ಲಿ ಹಕ್ಕಿಯೊಂದು ಸಿಕ್ಕಿಹಾಕಿಕೊಂಡಿದ್ದು, ಸಮಸ್ಯೆಯ ಪ್ರಾಥಮಿಕ ಕಾರಣವೆಂಬುದಾಗಿ ಪರಿಗಣಿಸಲಾಗಿದೆ ಎಂದು ಹೇಳಿರುವ ವಕ್ತಾರರು, ಒಂದು ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವರದಿಗಳು ಸರಿಯಲ್ಲ ಎಂದಿದ್ದಾರೆ.

‘‘ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಬೆದರಿಕೆ ಉಂಟಾಗಿಲ್ಲ. ವಿಮಾನದ ಭೂಸ್ಪರ್ಶ ನಿಗದಿತ ರೀತಿಯಲ್ಲಿಯೇ ನಡೆದಿದೆ. ಭೂಸ್ಪರ್ಶದ ವೇಳೆ ಯಾವುದೇ ಎಚ್ಚರಿಕೆಯನ್ನು ಹೊರಡಿಸಲಾಗಿಲ್ಲ’’ ಎಂದು ಅವರು ಹೇಳಿದ್ದಾರೆ.

ಬೆಂಕಿಯೊಂದಿಗೆ ಹಾರುತ್ತಿರುವ ವಿಮಾನ

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿರುವ ವೀಡಿಯೊಗಳು, ರೆಕ್ಕೆಯಲ್ಲಿ ಬೆಂಕಿ ಹತ್ತಿಕೊಂಡಿರುವ ವಿಮಾನವೊಂದು ಹಾರುವುದನ್ನು ತೋರಿಸಿವೆ. ಸೌದಿ ತಂಡದ ವಿಮಾನ ಎಂಬ ಬರಹ ವಿಮಾನದಲ್ಲಿ ಕಾಣುತ್ತಿದೆ.

 ಈ ವೀಡಿಯೊವನ್ನು ನಾಗರಿಕ ವಾಯುಯಾನ ನಿಗಾ ವೆಬ್‌ಸೈಟ್ ‘ಏರ್‌ಲೈವ್.ನೆಟ್’ ಒದಗಿಸಿದೆ. ರೊಸ್ತೊವ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ವೇಳೆ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿತು ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News