ಸಂಘರ್ಷಪೀಡಿತ ದೇಶಗಳ ಜನರಿಗೆ ಒಂದು ವರ್ಷ ನೆಲೆಸಲು ಅವಕಾಶ ನೀಡಲಿದೆ ಯುಎಇ

Update: 2018-06-19 17:36 GMT

ಅಬುಧಾಬಿ (ಯುಎಇ), ಜೂ. 19: ಯುದ್ಧ ಮತ್ತು ಪ್ರಾಕೃತಿಕ ವಿಕೋಪಗಳಿಂದ ಬಳಲುತ್ತಿರುವ ದೇಶಗಳ ಪ್ರಜೆಗಳಿಗೆ ಯುಎಇಯಲ್ಲಿ ಒಂದು ವರ್ಷ ನೆಲೆಸಲು ಅವಕಾಶ ನೀಡುವ ನಿರ್ಣಯವೊಂದಕ್ಕೆ ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅಧ್ಯಕ್ಷತೆಯ ಸಚಿವ ಸಂಪುಟ ಅಂಗೀಕಾರ ನೀಡಿದೆ.

ವಲಸಿಗರು ತಮ್ಮ ಸಂಘರ್ಷಪೀಡಿತ ದೇಶಗಳಿಗೆ ಹಿಂದಿರುಗಲು ಸಿದ್ಧರಾಗುವವರೆಗೆ, ತಮ್ಮ ಜೀವನ ಪರಿಸ್ಥಿತಿಯನ್ನು ಸುಧಾರಿಸಲು ಅವಕಾಶ ನೀಡುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ನೂತನ ನಿರ್ಣಯದ ಪ್ರಕಾರ, ಸಂಘರ್ಷಪೀಡಿತ ದೇಶಗಳ ಪ್ರಜೆಗಳಿಗೆ, ಅವರ ವೀಸಾ ಸ್ಥಿತಿಗತಿ ಏನೇ ಇದ್ದರೂ ಆಗಸ್ಟ್ 1 ಮತ್ತು ಅಕ್ಟೋಬರ್ 31ರ ನಡುವೆ ಒಂದು ವರ್ಷದ ವಾಸ್ತವ್ಯ ಪರವಾನಿಗೆಯನ್ನು ನೀಡಲಾಗುವುದು ಹಾಗೂ ಈ ಪರವಾನಿಗೆಯನ್ನು ಮುಂದೆ ವಿಸ್ತರಿಸಲೂ ಸಾಧ್ಯವಿದೆ.

ಅದೇ ವೇಳೆ, ಅವರ ಮೇಲೆ ವಿಧಿಸಬಹುದಾದ ಯಾವುದೇ ದಂಡದಿಂದಲೂ ವಿನಾಯಿತಿ ನೀಡಲಾಗುವುದು.

 ಜಗತ್ತಿನಾದ್ಯಂತ ಅಗತ್ಯವಿರುವ ಎಲ್ಲರಿಗೂ ನೆರವು ನೀಡುವ ಹಾಗೂ ಎಲ್ಲ ರಾಷ್ಟ್ರೀಯರಿಗೂ ಆಶ್ರಯ ನೀಡುವ ತನ್ನ ಹೆಗ್ಗಳಿಕೆಯನ್ನು ಸಾಬೀತುಪಡಿಸುವ ದೃಷ್ಟಿಯಿಂದ ಯುಎಇ ಈ ಕ್ರಮ ತೆಗೆದುಕೊಂಡಿದೆ.

ಅಂತಾರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆಯ ಸಕ್ರಿಯ ಬೆಂಬಲಿಗನ ನೆಲೆಯಲ್ಲಿ, ಜಗತ್ತಿನ ಅತ್ಯಂತ ದುರ್ಬಲರಿಗೆ ಬೆಂಬಲ ನೀಡುವ ಯುಎಇಯ ವೌಲ್ಯಗಳು ಮತ್ತು ಜವಾಬ್ದಾರಿಗೆ ಪೂರಕವಾಗಿ ಅದು ಈ ನಿರ್ಧಾರಕ್ಕೆ ಬಂದಿದೆ.

ಸಿರಿಯ ನಿರಾಶ್ರಿತರ ಹರ್ಷ

ಸಿರಿಯದ ಆಂತರಿಕ ಸಂಘರ್ಷಕ್ಕೆ ಬೆದರಿ ಯುಎಇಗೆ ಪಲಾಯನಗೈದಿರುವ ವಲಸಿಗರು ಯುಎಇ ಸಚಿವ ಸಂಪುಟ ಅಂಗೀಕರಿಸಿರುವ ನೂತನ ನಿರ್ಣಯದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಯುಎಇಯ ನೂತನ ನಿಯಮವು ಒಂದು ವರ್ಷ ಕಾನೂನುಬದ್ಧವಾಗಿ ಯುಎಇಯಲ್ಲಿ ನೆಲೆಸಲು ಅಕ್ರಮ ವಲಸಿಗರಿಗೆ ಅವಕಾಶ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News