ಸೌದಿ: 60 ಕಿ.ಮೀ. ಉದ್ದದ ಕಾಲುವೆ ನಿರ್ಮಾಣಕ್ಕೆ ಚಾಲನೆ

Update: 2018-06-20 13:23 GMT

ರಿಯಾದ್ (ಸೌದಿ ಅರೇಬಿಯ), ಜೂ. 20: ಸೌದಿ ಅರೇಬಿಯ ಮತ್ತು ಕತರ್ ದೇಶಗಳ ಗಡಿಯುದ್ದಕ್ಕೂ ಸೌದಿ ಭೂಭಾಗದಲ್ಲಿ 60 ಕಿಲೋಮೀಟರ್ ಉದ್ದದ ಕಾಲುವೆ ಅಗೆಯಲು ಸೌದಿ ಅರೇಬಿಯ ಟೆಂಡರ್‌ಗಳನ್ನು ಆಹ್ವಾನಿಸಿದೆ. ಟೆಂಡರ್‌ಗಳನ್ನು ಸ್ವೀಕರಿಸಲು ಜೂನ್ 25 ಕೊನೆಯ ದಿನಾಂಕ.

ಈ ಯೋಜನೆ ಕಾರ್ಯಗತಗೊಂಡಾಗ ಕತರ್ ದ್ವೀಪವಾಗಿ ಮಾರ್ಪಡುತ್ತದೆ.

 ‘ಸಾಲ್ವ’ ಕಾಲುವೆ ನಿರ್ಮಾಣಕ್ಕಾಗಿ 5 ಅಂತಾರಾಷ್ಟ್ರೀಯ ಕಂಪೆನಿಗಳು ಈವರೆಗೆ ತಮ್ಮ ಟೆಂಡರ್‌ಗಳನ್ನು ಸಲ್ಲಿಸಿವೆ. 90 ದಿನಗಳಲ್ಲಿ ಟೆಂಡರ್ ಗೆದ್ದವರನ್ನು ಘೋಷಿಸಲಾಗುವುದು. ಟೆಂಡರ್ ಗೆದ್ದ ಕಂಪೆನಿಯು ಒಂದು ವರ್ಷದಲ್ಲಿ ಕಾಲುವೆ ತೋಡುವ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಸೌದಿ ದೈನಿಕ ‘ಮಕ್ಕಾ’ ವರದಿ ಮಾಡಿದೆ.

ಸಾಲ್ವ, ಸಕಕ್, ಖೊರ್ ಅಲ್ ಅದೀದ್ ಮತ್ತು ರಾಸ್ ಅಬು ಕಮೀಸ್‌ನ ಎರಡು ಸ್ಥಳಗಳಲ್ಲಿ ಖಾಸಗಿ ಬೀಚ್‌ಗಳನ್ನೊಳಗೊಂಡ ರಿಸಾರ್ಟ್‌ಗಳನ್ನು ಸ್ಥಾಪಿಸುವ ಯೋಜನೆಗಳು ಪರಿಶೀಲನೆಯಲ್ಲಿವೆ.

ಸಾಲ್ವ ಮತ್ತು ಅಕ್ಲತ್ ಅಲ್ ಝವಾಯೀದ್‌ಗಳಲ್ಲಿ ಬಂದರುಗಳನ್ನು ನಿರ್ಮಿಸಲಾಗುವುದು ಹಾಗೂ ಈ ಬಂದರ್‌ಗಳು ರಾಸ್ ಅಬು ಕಮೀಸ್‌ನಲ್ಲಿರುವ ಬಂದರಿಗೆ ಪೂರಕವಾಗಿರುತ್ತದೆ.

ಕಾಲುವೆಯು ಸಂಪೂರ್ಣವಾಗಿ ಸೌದಿ ಭೂಭಾಗದಲ್ಲಿರುತ್ತದೆ ಹಾಗೂ ಅದು ಕತರ್‌ನ ಅಧಿಕೃತ ಗಡಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುತ್ತದೆ.

ಸಾಲ್ವ ಕಾಲುವೆ ಮತ್ತು ಕತರ್ ಗಡಿ ನಡುವಿನ ಒಂದು ಕಿಲೋಮೀಟರ್ ಜಾಗದಲ್ಲಿ ಸೌದಿ ಸೇನಾ ನೆಲೆಯೊಂದನ್ನು ಸ್ಥಾಪಿಸಲಾಗುವುದು. ಉಳಿದ ಸ್ಥಳದಲ್ಲಿ ಸೌದಿ ಪರಮಾಣು ರಿಯಾಕ್ಟರ್‌ಗಳ ತ್ಯಾಜ್ಯ ವಿಲೇವಾರಿ ಸ್ಥಳವನ್ನಾಗಿ ಮಾಡಲಾಗುವುದು.

ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ಕಳೆದ ವರ್ಷದ ಜೂನ್ 5ರಂದು ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತದೆ ಎಂದು ಆರೋಪಿಸಿ ಅದರ ಮೇಲೆ ಆರ್ಥಿಕ ಮತ್ತು ರಾಜತಾಂತ್ರಿಕ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

5,000 ಕೋಟಿ ರೂ. ವೆಚ್ಚದ ಯೋಜನೆ

2.8 ಬಿಲಿಯ ಸೌದಿ ರಿಯಾಲ್ (ಸುಮಾರು 5,000 ಕೋಟಿ ರೂಪಾಯಿ) ವೆಚ್ಚದ ಪ್ರಸ್ತಾಪಿತ ಕಾಲುವೆಯು ಸಾಲ್ವದಿಂದ ಖೊರ್ ಅಲ್ ಅದೀದ್‌ವರೆಗೆ ಹಾದುಹೋಗುತ್ತದೆ. ಅದು 200 ಮೀಟರ್ ಅಗಲವಿರುತ್ತದೆ ಹಾಗೂ 15ರಿಂದ 20 ಮೀಟರ್ ಆಳವಿರುತ್ತದೆ. 295 ಮೀಟರ್ ಉದ್ದ ಹಾಗೂ 33 ಮೀಟರ್ ಅಗಲದ ಹಡಗುಗಳು ಈ ಕಾಲುವೆಯಲ್ಲಿ ಹಾದು ಹೋಗಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News