ಯುಎಇ: ವಿಧವೆಯರು, ವಿಚ್ಛೇದಿತೆಯರ ವೀಸಾ ಒಂದು ವರ್ಷ ವಿಸ್ತರಣೆ

Update: 2018-06-20 16:32 GMT

ಅಬುಧಾಬಿ (ಯುಎಇ), ಜೂ. 20: ಯುಎಇಯಲ್ಲಿ ವಾಸಿಸುತ್ತಿರುವ ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರು ಒಂದು ವರ್ಷದ ವೀಸಾ ಅವಧಿ ವಿಸ್ತರಣೆಗಾಗಿ ಅರ್ಜಿ ಸಲ್ಲಿಸಬಹುದು ಎಂದು ಮಂಗಳವಾರ ಪ್ರಕಟಿಸಲಾಗಿದೆ.

ವಿಚ್ಛೇದನ ಲಭಿಸಿದ ದಿನ ಅಥವಾ ಗಂಡ ಮರಣ ಹೊಂದಿದ ದಿನದಿಂದ ಒಂದು ವರ್ಷದ ಅವಧಿಯವರೆಗೆ ಈ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ವೀಸಾ ವಿಸ್ತರಣೆ ನೀಡುವ ನಿರ್ಧಾರವನ್ನು ಯುಎಇ ಸಚಿವ ಸಂಪುಟ ಅಂಗೀಕರಿಸಿದೆ.

 ಯುಎಇಯು ಇತ್ತೀಚಿನ ದಿನಗಳಲ್ಲಿ ವೀಸಾ ನಿಯಮಗಳಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡುತ್ತಿದ್ದು, ಆ ಪೈಕಿ ಇದೂ ಒಂದಾಗಿದೆ.

ಕುಟುಂಬದ ಮುಖ್ಯಸ್ಥನ ನಷ್ಟದ ಬಳಿಕ, ವಿಧವೆಯರು ಮತ್ತು ವಿಚ್ಛೇದಿತರ ಪರಿಸ್ಥಿತಿಯನ್ನು ಪರಿಗಣಿಸಿ, ಅವರಿಗೆ ದೇಶದಲ್ಲಿ ವಾಸ್ತವ್ಯ ಮುಂದುವರಿಸುವುದು ಸಾಧ್ಯವಾಗಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’’ ಎಂದು ಸಚಿವ ಸಂಪುಟ ತಿಳಿಸಿದೆ.

ಈ ನಿಯಮವನ್ನು ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಾರಿಗೆ ತರಲಾಗುವುದು.

 ಈಗ, ಗಂಡಂದಿರ ಪ್ರಾಯೋಜಕತ್ವ ಹೊಂದಿರುವ ಮಹಿಳೆಯರು ವಿಚ್ಛೇದನದ ಬಳಿಕ ದೇಶ ತೊರೆಯಬೇಕಾಗುತ್ತದೆ. ಗಂಡನ ಸಾವಿನ ಪ್ರಕರಣಗಳಲ್ಲಿ, ಮಹಿಳೆಯರು ತಮ್ಮ ವಾಸ್ತವ್ಯ ವೀಸಾದ ಉಳಿಕೆ ಅವಧಿಯವರೆಗೆ ಯುಎಇಯಲ್ಲಿ ವಾಸಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News