ಸೌದಿ ಯುವರಾಜ, ಟ್ರಂಪ್ ಅಳಿಯ ಮಾತುಕತೆ

Update: 2018-06-21 17:09 GMT

ಜಿದ್ದಾ, ಜೂ. 21: ಸೌದಿ ಅರೇಬಿಯ ಮತ್ತು ಅಮೆರಿಕಗಳ ನಡುವಿನ ಹೆಚ್ಚುತ್ತಿರುವ ಸಹಕಾರದ ಬಗ್ಗೆ ಮಾತನಾಡಲು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಳಿಯ ಹಾಗೂ ಶ್ವೇತಭವನದ ಹಿರಿಯ ಸಲಹೆಕಾರ ಜ್ಯಾರೆಡ್ ಕಶ್ನರ್ ಬುಧವಾರ ಭೇಟಿಯಾಗಿದ್ದಾರೆ.

ಗಾಝಾಕ್ಕೆ ಮಾನವೀಯ ನೆರವನ್ನು ಒದಗಿಸುವ ಅಗತ್ಯ ಹಾಗೂ ಇಸ್ರೇಲಿಗರು ಮತ್ತು ಫೆಲೆಸ್ತೀನಿಯರ ನಡುವೆ ಶಾಂತಿ ಏರ್ಪಡಿಸಲು ಟ್ರಂಪ್ ಆಡಳಿತ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆಯೂ ಅವರು ಚರ್ಚಿಸಿದರು.

ಮಧ್ಯಪ್ರಾಚ್ಯಕ್ಕೆ ಅಮೆರಿಕದ ರಾಯಭಾರಿ ಜಾಸನ್ ಗ್ರೀನ್‌ಬ್ಲಾಟ್ ಈ ಸಭೆಯಲ್ಲಿ ಭಾಗವಹಿಸಿದರು.

ಕಶ್ನರ್ ಇದೇ ವಿಷಯಕ್ಕೆ ಸಂಬಂಧಿಸಿ ಮಂಗಳವಾರ ಜೋರ್ಡಾನ್ ದೊರೆ ದ್ವಿತೀಯ ಅಬ್ದುಲ್ಲಾರೊಂದಿಗೆ ಅಮ್ಮಾನ್‌ನಲ್ಲಿ ಮಾತುಕತೆ ನಡೆಸಿದ್ದರು.

ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಶಾಂತಿ ಏರ್ಪಡಿಸಲು ತಾವು ರೂಪಿಸುತ್ತಿರುವ ಯೋಜನೆಯು ಹೆಚ್ಚು ಕಡಿಮೆ ಸಂಪೂರ್ಣವಾಗಿದೆ ಎಂದು ಕಶ್ನರ್ ಮತ್ತು ಗ್ರೀನ್‌ಬ್ಲಾಟ್ ಹೇಳಿದ್ದಾರೆ.

ಜೆರುಸಲೇಮನ್ನು ಇಸ್ರೇಲ್ ರಾಜಧಾನಿ ಎಂಬುದಾಗಿ ಅಮೆರಿಕ ಇತ್ತೀಚೆಗೆ ಘೋಷಿಸಿದ ಬಳಿಕ ಶಾಂತಿ ಪ್ರಕ್ರಿಯೆಗೆ ಹಿನ್ನಡೆಯಾಗಿರುವುದನ್ನು ಸ್ಮರಿಸಬಹುದಾಗಿದೆ. ಅಮೆರಿಕದ ಈ ನಿರ್ಧಾರಕ್ಕೆ ಫೆಲೆಸ್ತೀನಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News