10 ವರ್ಷಗಳಲ್ಲಿ ಕೆಎಸ್‌ರಿಲೀಫ್‌ನಿಂದ 2.22 ಲಕ್ಷ ಕೋಟಿ ರೂ. ನೆರವು

Update: 2018-06-22 16:08 GMT

ಜಿದ್ದಾ (ಸೌದಿ ಅರೇಬಿಯ), ಜೂ. 22: ಸೌದಿ ಅರೇಬಿಯದ ಸರಕಾರಿ ನೆರವು ಸಂಸ್ಥೆ ಕಿಂಗ್ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್) 2007-17ರ ಅವಧಿಯಲ್ಲಿ ಒಟ್ಟು 32.83 ಬಿಲಿಯ ಡಾಲರ್ (ಸುಮಾರು 2.22 ಲಕ್ಷ ಕೋಟಿ ರೂಪಾಯಿ) ನೆರವು ನೀಡಿದೆ.

ಈ ಅವಧಿಯಲ್ಲಿ ಅದು 1,084 ಮಾನವೀಯ, ಅಭಿವೃದ್ಧಿ ಹಾಗೂ ಪರೋಪಕಾರ ಯೋಜನೆಗಳನ್ನು ಕೈಗೊಂಡಿದ್ದು, 78 ದೇಶಗಳು ಇದರ ನೆರವು ಪಡೆದಿವೆ.

ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಸಂಘಟನೆಗಳಿಗೆ 93 ಕೋಟಿ ಡಾಲರ್ (ಸುಮಾರು 6,298 ಕೋಟಿ ರೂಪಾಯಿ) ದೇಣಿಗೆಗಳನ್ನು ನೀಡಲಾಗಿದೆ.

ಯಮನ್ ಕೆಎಸ್‌ರಿಲೀಫ್‌ನಿಂದ ಗರಿಷ್ಠ ನೆರವು ಪಡೆದ ದೇಶವಾಗಿದೆ. ಅದು 290 ಯೋಜನೆಗಳ ಮೂಲಕ 14 ಬಿಲಿಯ ಡಾಲರ್ (ಸುಮಾರು 95,000 ಕೋಟಿ ರೂಪಾಯಿ) ನೆರವು ಪಡೆದಿದೆ.

ನಂತರದ ಸ್ಥಾನಗಳಲ್ಲಿ ಸಿರಿಯ, ಈಜಿಪ್ಟ್, ನೈಜರ್ ಮತ್ತು ಮಾರಿಟಾನಿಯ ದೇಶಗಳಿವೆ.

ಯಮನ್ ಬಾಲ ಸೈನಿಕರ ಪುನರ್ವಸತಿಗಾಗಿ ಕಾರ್ಯಕ್ರಮ

 ಸಶಸ್ತ್ರ ಸಂಘರ್ಷಕ್ಕಾಗಿ ಹೌದಿ ಬಂಡುಕೋರರಿಂದ ನೇಮಕಾತಿಗೊಂಡಿರುವ ಮಕ್ಕಳ ಪುನರ್ವಸತಿ ಕಾರ್ಯಕ್ರಮದ 5 ಮತ್ತು 6ನೇ ಹಂತಗಳಿಗೆ ಕೆಎಸ್‌ರಿಲೀಫ್ ಗುರುವಾರ ಚಾಲನೆ ನೀಡಿದೆ.

ಯಮನ್‌ನ ವಿವಿಧ ಪ್ರಾಂತಗಳ 80 ಬಾಲ ಸೈನಿಕರ ಪುನರ್ವಸತಿಯ ಗುರಿಯನ್ನು ಈ ಎರಡು ಹಂತಗಳು ಹೊಂದಿವೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಸಮಗ್ರ ಪುನರ್ವಸತಿ ಕಾರ್ಯಕ್ರಮವು 2,000 ಬಾಲ ಸೈನಿಕರಿಗೆ ಪುನರ್ವಸತಿ ಕಲ್ಪಿಸಲು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News