ಸೌದಿ ರಸ್ತೆಗಳಲ್ಲಿ ವಾಹನ ಚಲಾಯಿಸಿದ ಮಹಿಳೆಯರು

Update: 2018-06-24 15:56 GMT

ರಿಯಾದ್, ಜೂ. 24: ಸೌದಿ ಅರೇಬಿಯದ ಮಹಿಳೆಯರು ರವಿವಾರ ಬೆಳಗ್ಗೆಯಾಗುವವರೆಗೂ ಕಾಯಲಿಲ್ಲ! ಶನಿವಾರ ಮಧ್ಯರಾತ್ರಿ ಕಳೆಯುತ್ತಿದ್ದಂತೆಯೇ ಅವರು ತಮ್ಮ ಕಾರುಗಳೊಂದಿಗೆ ರಸ್ತೆಗಿಳಿದರು ಹಾಗೂ ಆ ಮೂಲಕ ದಾಖಲೆ ಪುಸ್ತಕಗಳಿಗೆ ಸೇರ್ಪಡೆಗೊಂಡರು.

 ರವಿವಾರ ಸೌದಿ ಮಹಿಳೆಯರ ಮೇಲಿದ್ದ 35 ವರ್ಷಗಳ ವಾಹನ ಚಾಲನೆ ನಿಷೇಧ ಕೊನೆಗೊಂಡಿತು.

ಶನಿವಾರ ಮಧ್ಯರಾತ್ರಿ 12 ಗಂಟೆ ಬಾರಿಸುತ್ತಿದ್ದಂತೆಯೇ, ಹಲವಾರು ಮಹಿಳೆಯರು ತಮ್ಮ ನೂತನ ವಾಹನ ಚಾಲನಾ ಪರವಾನಿಗೆಗಳೊಂದಿಗೆ ರಾಜಧಾನಿ ರಿಯಾದ್‌ನ ನಿಬಿಡ ತಹ್ಲಿಯ ರಸ್ತೆ ಹಾಗೂ ಇತರ ರಸ್ತೆಗಳಲ್ಲಿ ಕಾರುಗಳನ್ನು ಚಲಾಯಿಸಿದರು.

ಕೆಂಪು ಸಮುದ್ರದ ನಗರ ಜಿದ್ದಾ ಮತ್ತು ಸೌದಿಯ ಇತರ ನಗರಗಳ ಬೀದಿಗಳಲ್ಲೂ ಇದೇ ದೃಶ್ಯಗಳು ಕಂಡುಬಂದವು.

 ‘‘ಇಂದು ಭಾವನೆಗಳು ಗರಿಗೆದರಿದ ದಿನ. ಈ ದಿನ ಅಂತಿಮವಾಗಿ ಬಂದಿರುವುದಕ್ಕೆ ನಾನು ರೋಮಾಂಚಿತಗೊಂಡಿದ್ದೇನೆ. ಇದು ನಿಜವಾಗಿಯೂ ಕನಸು ನನಸಾದ ಕ್ಷಣ. ನನ್ನ ದೇಶದ ರಸ್ತೆಗಳಲ್ಲಿ ಕೊನೆಗೂ ವಾಹನ ಚಲಾಯಿಸಲು ಸಾಧ್ಯವಾಗಿರುವುದಕ್ಕೆ ನನಗೆ ಸಂತೋಷವಾಗಿದೆ’’ ಎಂದು ಸ್ಥಳೀಯ ನಿವಾಸಿ ಸಲ್ಮಾ ರಶೀದ್ ಅಲ್‌ಸುನೈದ್ ಹೇಳಿದರು.

‘‘ಇದು ಸೌದಿ ಅರೇಬಿಯದ ಪ್ರತಿಯೊಬ್ಬ ಮಹಿಳೆಯರ ಪಾಲಿಗೆ ಅತ್ಯಂತ ಮಹತ್ವದ ದಿನ. ನನ್ನ ಭಾವನೆಗಳನ್ನು ವರ್ಣಿಸಲು ಸಾಧ್ಯವಿಲ್ಲ. ನನ್ನ ದೇಶದಲ್ಲಿ, ನನ್ನ ನಗರದಲ್ಲಿ ಮೊದಲ ಬಾರಿಗೆ ವಾಹನ ಚಲಾಯಿಸುವುದಕ್ಕೆ ನಾನು ರೋಮಾಂಚಿತಳಾಗಿದ್ದೇನೆ’’ ಎಂದು ರಿಯಾದ್ ಸಮೀಪದ ಅಲ್-ಖರ್ಜ್‌ನಲ್ಲಿರುವ ಪ್ರಿನ್ಸ್ ಸತ್ತಮ್ ಬಿನ್ ಅಬ್ದುಲಝೀಝ್ ವಿಶ್ವವಿದ್ಯಾನಿಲಯದ ಟೆಕ್ನಾಲಜಿ ವಿಭಾಗದ ಸಹಾಯಕ ಪ್ರೊಫೆಸರ್ ತಹಾನಿ ಅಲ್ದುಸೆಮಾನಿ ಹೇಳಿದರು.

ಐತಿಹಾಸಿಕ ನಿರ್ಧಾರ

ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡುವ ಐತಿಹಾಸಿಕ ನಿರ್ಧಾರವನ್ನು ದೊರೆ ಸಲ್ಮಾನ್ ಬಿನ್ ಅಬ್ದುಲಝೀಝ್ 2017ರ ಸೆಪ್ಟಂಬರ್‌ನಲ್ಲಿ ತೆಗೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಅವರ ಈ ನಿರ್ಧಾರವು ಜಗತ್ತಿನಾದ್ಯಂತ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು.

ಶನಿವಾರ ಮಧ್ಯರಾತ್ರಿಯವರೆಗೆ ಸೌದಿ ಅರೇಬಿಯ ಮಹಿಳೆಯರ ವಾಹನ ಚಾಲನೆಗೆ ಅವಕಾಶ ನೀಡದ ಜಗತ್ತಿನ ಏಕೈಕ ದೇಶವಾಗಿತ್ತು.

ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ‘ಮುನ್ನೋಟ 2030’ನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ದೊರೆ ತೆಗೆದುಕೊಂಡಿದ್ದಾರೆ.

ಮಹಿಳಾ ಸಬಲೀಕರಣ ‘ಮುನ್ನೋಟ 2030’ರ ಪ್ರಮುಖ ಅಂಶವಾಗಿದೆ.

ವಿದೇಶಿ ಚಾಲಕರ ಕೆಲಸಕ್ಕೆ ಕುತ್ತು: ಕನಿಷ್ಠ 50 ಶೇ. ಚಾಲಕರು ಸ್ವದೇಶಕ್ಕೆ ವಾಪಸ್

ಸೌದಿ ಅರೇಬಿಯದಲ್ಲಿ ಮಹಿಳೆಯರ ವಾಹನ ಚಾಲನೆಗೆ ಅವಕಾಶ ಲಭಿಸಿರುವ ಹಿನ್ನೆಲೆಯಲ್ಲಿ, ಭಾರತ ಸೇರಿದಂತೆ ಏಶ್ಯ ಮತ್ತು ಆಫ್ರಿಕದ ಅಭಿವೃದ್ಧಿಶೀಲ ದೇಶಗಳ ಚಾಲಕರಿಗೆ ಬೇಡಿಕೆ ಕಡಿಮೆಯಾಗಲಿದೆ.

ಮುಂದಿನ 10 ವರ್ಷಗಳಲ್ಲಿ ವಿದೇಶಿ ಚಾಲಕರ ನೇಮಕಾತಿಯಲ್ಲಿ 50 ಶೇಕಡ ಕಡಿತ ಉಂಟಾಗಲಿದೆ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.

ನೇಮಕಾತಿ ಶುಲ್ಕ ಕಡಿಮೆಯಾಗಲಿದೆ ಹಾಗೂ ವಿದೇಶಿ ಚಾಲಕರೂ ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ನೇಮಕಾತಿ ಏಜಂಟ್ ಹಮದ್ ಅಲ್-ಬೈಶನ್ ಅಭಿಪ್ರಾಯಪಡುತ್ತಾರೆ.

ಮಹಿಳೆಯರ ವಾಹನ ಚಾಲನೆಗೆ ಅವಕಾಶ ನೀಡುವ ಮೂಲಕ ಸೌದಿ ಅರೇಬಿಯವು ವರ್ಷಕ್ಕೆ 20 ಬಿಲಿಯ ರಿಯಾಲ್ (36,193 ಕೋಟಿ ರೂಪಾಯಿ) ಉಳಿಸಬಹುದಾಗಿದೆ ಎಂಬುದಾಗಿ ಸೌದಿ ಎಕನಾಮಿಕ್ ಅಸೋಸಿಯೇಶನ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News