×
Ad

ದುಬೈಗೆ ತೆರಳಿದ್ದ ಕಾಸರಗೋಡಿನ 2 ಕುಟುಂಬಗಳ 11 ಮಂದಿ ನಾಪತ್ತೆ

Update: 2018-06-27 19:26 IST

ಕಾಸರಗೋಡು, ಜೂ.27: ದುಬೈಗೆ ತೆರಳಿದ್ದ ಎರಡು ಕುಟುಂಬಗಳ 11 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದುಬೈಗೆ ತೆರಳಿದ ನಂತರ ಈ ಕುಟುಂಬಗಳು ಎಲ್ಲಿದೆ ಎನ್ನುವ ಬಗ್ಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಈ ಬಗ್ಗೆ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚೆಮ್ಮನಾಡ್ ಮುಂಡಾಂಕುಲದ ಕುನ್ನಿಲ್ ಹೌಸಿನ ಅಬ್ದುಲ್‍ ಹಮೀದ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಸಣ್ಣಮಕ್ಕಳ ಸಹಿತ ಆರು ಮಂದಿ ನಾಪತ್ತೆಯಾಗಿದ್ದಾರೆಂದು ಆರೋಪಿಸಿದ್ದಾರೆ. ಎರಡನೆ ಕುಟುಂಬವೂ ನಾಪತ್ತೆಯಾದ ವಿವರ ನಂತರ ಬಹಿರಂಗವಾಗಿದೆ.

ಮೊದಲ ಪ್ರಕರಣದಲ್ಲಿ ಅಬ್ದುಲ್ ಹಮೀದ್‍ರ  ಪುತ್ರಿ ನಸೀರಾ(25), ಪತಿ ಮೊಗ್ರಾಲ್‍ನ ಸವಾದ್(35), ಮಕ್ಕಳಾದ ಮುಸ್‍ಅಬ್(6), ಮುಹಮ್ಮಿಲ್ (11 ತಿಂಗಳು) ಸವಾದ್‍ನ ಎರಡನೆ ಪತ್ನಿ ಚೆಮ್ಮನಾಡ್ ರಹಾನತ್ (25) ನಾಪತ್ತೆಯಾಗಿದ್ದಾರೆಂದು ಕೇಸು  ದಾಖಲಿಸಿಕೊಳ್ಳಲಾಗಿದೆ. ಅಣಂಗೂರಿನ ಇನ್ನೊಂದು ಕುಟುಂಬದ ಐದು ಮಂದಿ ನಾಪತ್ತೆಯಾದ ವಿಚಾರವೂ ಹಮೀದ್ ಅವರಿಂದಲೇ ಬಹಿರಂಗಗೊಂಡಿದೆ. ಅಣಂಗೂರಿನ ಅನ್ವರ್ ಪತ್ನಿ ಝೀನತ್ ಹಾಗು ಇವರ ಮೂವರು ಮಕ್ಕಳು ಕಳೆದ ಜೂನ್ 15ರಿಂದ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸವಾದ್ ಕಾಣೆಯಾಗುವ ಮೊದಲು ದುಬೈಯಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಇವರೆಲ್ಲ ಒಮಾನ್ ಮೂಲಕ ಯಮನ್‍ಗೆ ಹೋಗಿರಬಹುದು ಎಂದು ಶಂಕಿಸಲಾಗಿದೆ. ಇಬ್ಬರ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News