ಬಹರೈನ್‌ಗೆ ಆರ್ಥಿಕ ನೆರವು ನೀಡಲು ಸೌದಿ, ಕುವೈತ್, ಯುಎಇ ಮುಂದು

Update: 2018-06-27 15:02 GMT

ದುಬೈ, ಜೂ. 27: ಬಹರೈನ್‌ನ ಆರ್ಥಿಕ ಸುಧಾರಣೆಗಳು ಮತ್ತು ವಿತ್ತೀಯ ಸ್ಥಿರತೆಗೆ ಬೆಂಬಲ ನೀಡುವ ಸಮಗ್ರ ಯೋಜನೆಯೊಂದನ್ನು ಸೌದಿ ಅರೇಬಿಯ, ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಶೀಘ್ರವೇ ಘೋಷಿಸಲಿವೆ.

 2014ರಲ್ಲಿ ತೈಲ ಬೆಲೆ ಕುಸಿತವು ಬಹರೈನ್‌ನ ಆರ್ಥಿಕತೆ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟು ಮಾಡಿದೆ. ಮಂಗಳವಾರ ಬಹರೈನ್‌ನ ಕರೆನ್ಸಿ ದೀನಾರ್ ಅಮೆರಿಕದ ಡಾಲರ್ ವಿರುದ್ಧ 17 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ.

ಸೌದಿ ಅರೇಬಿಯ ಮತ್ತು ಬಹರೈನ್‌ನ ಇತರ ಪ್ರಾದೇಶಿಕ ಮಿತ್ರದೇಶಗಳು ಬಹರೈನ್‌ಗೆ ಹೆಚ್ಚುವರಿ ಆರ್ಥಿಕ ಬೆಂಬಲವನ್ನು ನೀಡುತ್ತವೆ ಹಾಗೂ ಈ ಬೆಳವಣಿಗೆಯು ಮಾರುಕಟ್ಟೆಯಲ್ಲಿನ ತೀವ್ರ ಅಸ್ಥಿರತೆಯನ್ನು ತಡೆಯುತ್ತವೆ ಎಂಬ ವಿಶ್ವಾಸವನ್ನು ಹೆಚ್ಚಿನ ಬ್ಯಾಂಕರ್‌ಗಳು ವ್ಯಕ್ತಪಡಿಸಿದ್ದಾರೆ.

ಬಹರೈನ್‌ನ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆ ದೇಶದ ನಾಯಕರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಕೊಲ್ಲಿಯ ಮೂರು ಶ್ರೀಮಂತ ದೇಶಗಳು ಮಂಗಳವಾರ ಹೊರಡಿಸಿದ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿವೆ.

ಬಹರೈನ್‌ನ ಆರ್ಥಿಕತೆಯ ಗಾತ್ರ ಕಿರಿದಾಗಿರುವ ಹಿನ್ನೆಲೆಯಲ್ಲಿ, ಅದನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡುವುದು ಅದರ ಶ್ರೀಮಂತ ನೆರೆ ದೇಶಗಳಿಗೆ ಕಷ್ಟವಲ್ಲ ಎಂದು ಹೇಳಲಾಗಿದೆ.

2018ರಲ್ಲಿ 3.5 ಬಿಲಿಯ ಡಾಲರ್ (ಸುಮಾರು 24,000 ಕೋಟಿ ರೂಪಾಯಿ) ಬಜೆಟ್ ವಿತ್ತೀಯ ಕೊರತೆಯನ್ನು ಬಹರೈನ್ ಎದುರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News