ಯುಎಇಯಲ್ಲಿ ಈ ತಪ್ಪು ಮಾಡಿದರೆ ಜೈಲೇ ಗತಿ

Update: 2018-06-27 15:07 GMT

ದುಬೈ, ಜೂ. 27: ಯುಎಇಯಲ್ಲಿ ಹೆಚ್ಚಿನ ಉದ್ಯೋಗಾವಕಾಶ ಪಡೆಯುವುದಕ್ಕಾಗಿ ಹಲವಾರು ಉದ್ಯೋಗಾಕಾಂಕ್ಷಿಗಳು ತಮ್ಮ ಅರ್ಜಿಗಳಲ್ಲಿ ತಪ್ಪು ಮಾಹಿತಿಗಳನ್ನು ನೀಡುತ್ತಾರೆ. ಆದರೆ, ಇದು ಮುಂದೆ ತಮ್ಮನ್ನು ಜೈಲಿಗಟ್ಟಬಹುದು ಎಂಬ ಸಂಗತಿಯನ್ನು ಅವರು ಆ ಕ್ಷಣದಲ್ಲಿ ಮರೆಯುತ್ತಾರೆ.

ಯುಎಇಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ ಸಿವಿ (ಸ್ವವಿವರ) ಸಲ್ಲಿಸುವುದು ಕಡ್ಡಾಯ. ಇದರಲ್ಲಿ ಕೆಲವು ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸುತ್ತಾರೆ ಹಾಗೂ ತಮ್ಮ ಅನುಭವಕ್ಕೆ ಇನ್ನೂ ಕೆಲವು ವರ್ಷಗಳನ್ನು ಸೇರಿಸುತ್ತಾರೆ.

ಆದರೆ, ತಮ್ಮ ಸಿವಿಗಳಲ್ಲಿ ತಪ್ಪು ಮಾಹಿತಿ ನೀಡಿರುವುದು ಪತ್ತೆಯಾದರೆ, ಯುಇಎ ಕಾನೂನಿನ ಪ್ರಕಾರ, ಅಭ್ಯರ್ಥಿಗಳ ವಿರುದ್ಧ ದಂಡನಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ, ಅವರ ವಿರುದ್ಧ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ ಹಾಗೂ ಅವರಿಗೆ ಮೂರು ವರ್ಷಗಳ ಜೈಲು ವಿಧಿಸಲಾಗುತ್ತದೆ ಮತ್ತು/ಅಥವಾ ಗಡೀಪಾರು ಮಾಡಲಾಗುತ್ತದೆ.

ಅದೂ ಅಲ್ಲದೆ, ಯುಎಇಯಲ್ಲಿರುವ ವಿದೇಶಿಯರು ದಾಖಲೆಗಳು, ಗುತ್ತಿಗೆಗಳು, ಒಪ್ಪಂದಗಳು, ಚೆಕ್‌ಗಳು, ಅಧಿಕೃತ ಆರ್ಥಿಕ ಹೇಳಿಕೆಗಳು, ಶಿಕ್ಷಣ ಪ್ರಮಾಣಪತ್ರಗಳು ಮತ್ತು ವ್ಯಾಲಿಡೇಶನ್ ಸ್ಟಾಂಪ್‌ಗಳು, ಪಾಸ್‌ಪೋರ್ಟ್‌ಗಳು, ಕರೆನ್ಸಿಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಕಂಪೆನಿ ಲಾಂಛನಗಳನ್ನು ನಕಲಿ ಮಾಡಬಾರದು.

 ಸರಕಾರೇತರ ದಾಖಲೆಗಳನ್ನು ನಕಲಿ ಮಾಡುವುದು ಅಥವಾ ನಕಲಿ ಮಾಡಿದ ದಾಖಲೆಗಳನ್ನು ಬಳಸುವವರಿಗೆ ಒಂದು ತಿಂಗಳಿಂದ ಮೂರು ವರ್ಷಗಳವರೆಗಿನ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಹಾಗೂ ನಕಲಿ ಸರಕಾರಿ ದಾಖಲೆಗಳನ್ನು ಬಳಸಿದರೆ ಜೈಲು ಶಿಕ್ಷೆಯ ಪ್ರಮಾಣ 5 ವರ್ಷಗಳವರೆಗೆ ವಿಸ್ತರಿಸುತ್ತದೆ.

ಯಾವುದನ್ನು ನಕಲಿ ಎಂದು ಪರಿಗಣಿಸಲಾಗುತ್ತದೆ?

► ಬರಹ, ಸಂಖ್ಯೆಗಳು, ಅಂಕಗಳು ಅಥವಾ ಭಾವಚಿತ್ರಗಳನ್ನು ಸೇರಿಸುವ, ಅಳಿಸುವ ಅಥವಾ ಬದಲಾಯಿಸುವ ಮೂಲಕ  ಹಾಲಿ ದಾಖಲೆಯೊಂದಕ್ಕೆ ಮಾರ್ಪಾಡುಗಳನ್ನು ತರುವುದು.

► ನಕಲಿ ಸಹಿ ಅಥವಾ ಮೊಹರು, ಅಥವಾ ನಿಜವಾದ ಸಹಿ, ಮೊಹರು ಅಥವಾ ಹೆಬ್ಬೆಟ್ಟಿನಲ್ಲಿ ಮಾರ್ಪಾಡು ಮಾಡುವುದು.

► ದಾಖಲೆಯಲ್ಲಿ ಏನು ಬರೆದಿದೆ ಎನ್ನುವುದು ವ್ಯಕ್ತಿಗೆ ಗೊತ್ತಿಲ್ಲದೆ, ವಂಚನೆ ಅಥವ ಅಚ್ಚರಿಯ ಮೂಲಕ ಅವರಿಂದ ಸಹಿ, ಮೊಹರು ಅಥವಾ ಹೆಬ್ಬೆಟ್ಟನ್ನು ಪಡೆದುಕೊಳ್ಳುವುದು.

► ದಾಖಲೆಯ ನಕಲಿಯೊಂದನ್ನು ಸೃಷ್ಟಿಸುವುದು.

► ಸಹಿ, ಮೊಹರು ಅಥವಾ ಹೆಬ್ಬೆಟ್ಟು ಹಾಕಿದ ವ್ಯಕ್ತಿಯ ಒಪ್ಪಿಗೆ ಇಲ್ಲದೆ, ಸಹಿ, ಮೊಹರು ಅಥವಾ ಹೆಬ್ಬೆಟ್ಟು ಹಾಕಲಾದ ಖಾಲಿ         ಪತ್ರವನ್ನು ತುಂಬಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News