×
Ad

ಅಲ್-ಅಹ್ಸಾ ಓಯಸಿಸ್ ಜಾಗತಿಕ ಪಾರಂಪರಿಕ ತಾಣಗಳ ಪಟ್ಟಿಗೆ

Update: 2018-06-30 22:50 IST

ಜಿದ್ದಾ (ಸೌದಿ ಅರೇಬಿಯ), ಜೂ. 30: ಸೌದಿ ಅರೇಬಿಯದ ಈಸ್ಟರ್ನ್ ಪ್ರಾಂತದಲ್ಲಿರುವ ಅಲ್-ಅಹ್ಸಾ ಓಯಸಿಸ್‌ನ್ನು ಯುನೆಸ್ಕೊದ ಜಾಗತಿಕ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗ (ಎಸ್‌ಸಿಟಿಎಚ್)ದ ಅಧ್ಯಕ್ಷ, ರಾಜಕುಮಾರ ಸುಲ್ತಾನ್ ಬಿನ್ ಸಲ್ಮಾನ್ ಶುಕ್ರವಾರ ಹೇಳಿದ್ದಾರೆ.

ಬಹರೈನ್ ರಾಜಧಾನಿ ಮನಾಮದಲ್ಲಿ ನಡೆದ ಜಾಗತಿಕ ಪರಂಪರೆ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್-ಅಹ್ಸಾ ಓಯಸಿಸ್ ಯನೆಸ್ಕೊದ ಜಾಗತಿಕ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಸೌದಿ ಅರೇಬಿಯದ 5ನೇ ಸ್ಥಳವಾಗಿದೆ.

ಇದಕ್ಕೂ ಮೊದಲು, ಮದೈನ್ ಸಾಲಿಹ್ (2008), ದಿರಿಯಾದಲ್ಲಿರುವ ತರೀಫ್ ಉಪನಗರ (2010), ಐತಿಹಾಸಿಕ ಜಿದ್ದಾ (2014) ಮತ್ತು ಹೈಲ್ ವಲಯದಲ್ಲಿರುವ ರಾಕ್ ಕಲೆ (2015) ಈ ಪಟ್ಟಿಗೆ ಸೇರಿದ್ದವು.

ಅಲ್-ಅಹ್ಸಾ ಜಗತ್ತಿನ ಅತಿ ದೊಡ್ಡ ಖರ್ಜೂರ ಮರಗಳ ಓಯಸಿಸ್ ಆಗಿದೆ. ಇಲ್ಲಿ ಸುಮಾರು 30 ಲಕ್ಷ ಖರ್ಜೂರ ಮರಗಳಿವೆ. ಅದು ಮುಖ್ಯವಾಗಿ ‘ಖಲಾಸಾ’ ಖರ್ಜೂರಕ್ಕೆ ಪ್ರಸಿದ್ಧವಾಗಿದೆ. ಅದನ್ನು ಜಗತ್ತಿನ ಅತ್ಯಂತ ಶ್ರೇಷ್ಠ ಖರ್ಜೂರ ಎಂಬುದಾಗಿ ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News