ಹೆಚ್ಚುತ್ತಿರುವ ತೈಲ ಬೆಲೆ: ಸೌದಿ ಆರ್ಥಿಕತೆಯಲ್ಲಿ ಚೇತರಿಕೆ

Update: 2018-07-02 17:29 GMT

ರಿಯಾದ್, ಜು. 2: ಸೌದಿ ಅರೇಬಿಯದ ಆರ್ಥಿಕತೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೇತರಿಸಿಕೊಂಡಿದ್ದು, ಅಭಿವೃದ್ಧಿಯ ಪಥಕ್ಕೆ ಮರಳಿದೆ ಎನ್ನುವುದನ್ನು ಅಂಕಿ-ಅಂಶಗಳ ಪ್ರಾಧಿಕಾರ ಅಂಕಿ-ಸಂಖ್ಯೆಗಳು ಹೇಳಿವೆ.

ಮಾರ್ಚ್‌ಗೆ ಮುಕ್ತಾಯಗೊಂಡ ಮೂರು ತಿಂಗಳ ಅವಧಿಯಲ್ಲಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟು ದೇಶಿ ಉತ್ಪನ್ನ (ಜಿಡಿಪಿ) 1.2 ಶೇಕಡ ಏರಿಕೆ ಕಂಡಿದೆ. ನಿರಂತರ ನಾಲ್ಕು ತ್ರೈಮಾಸಿಕಗಳಲ್ಲಿ ಜಿಡಿಪಿ ಕುಸಿತ ಕಂಡ ಬಳಿಕ, ಈ ಏರಿಕೆ ಸಂಭವಿಸಿದೆ ಎಂದು ಪ್ರಾಧಿಕಾರ ತಿಳಿಸಿದೆ.

‘‘2017ರ ಆರ್ಥಿಕ ಕುಸಿತದ ಬಳಿಕ, ಸೌದಿ ಆರ್ಥಿಕತೆ ಚೇತರಿಸುತ್ತಿದೆ ಎನ್ನುವುದನ್ನು ಇದು ತೋರಿಸುತ್ತದೆ. ತೈಲ ಬೆಲೆಯಲ್ಲಿನ ಕುಸಿತ ಮತ್ತು ಸಾಂಸ್ಥಿಕ ಸುಧಾರಣೆ- ಈ ಎರಡರಿಂದಲೂ ಚೇತರಿಸುವ ಸಾಮರ್ಥ್ಯವನ್ನು ಸೌದಿ ಆರ್ಥಿಕತೆ ಹೊಂದಿದೆ ಎನ್ನುವುದಕ್ಕೆ ಇದು ಪುರಾವೆಯಾಗಿದೆ’’ ಎಂದಿದೆ.

ತೈಲ ಮತ್ತು ತೈಲೇತರ ಕ್ಷೇತ್ರಗಳಲ್ಲಿ ಆದ ಬೆಳವಣಿಗೆಯ ಫಲವಾಗಿ ಆರ್ಥಿಕತೆಯಲ್ಲಿ ಚೇತರಿಕೆ ಉಂಟಾಗಿದೆ. ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡ ತೈಲ ಬೆಲೆ ಕುಸಿತದಿಂದ ಜಾಗತಿಕ ತೈಲ ಬೆಲೆ ನಿರಂತರವಾಗಿ ಚೇತರಿಸುತ್ತಿರುವ ಹಿನ್ನೆಲೆಯಲ್ಲಿ ತೈಲ ಕ್ಷೇತ್ರವು 2018ರ ಮೊದಲ ತ್ರೈಮಾಸಿಕದಲ್ಲಿ 0.6 ಶೇಕಡ ಬೆಳವಣಿಗೆ ಕಂಡಿದೆ.

ಹಲವಾರು ಸರಕಾರಿ ನೀತಿಗಳ ಫಲವಾಗಿ ತೈಲೇತರ ಕ್ಷೇತ್ರವು 2018ರ ಮೊದಲ ತ್ರೈಮಾಸಿಕದಲ್ಲಿ 1.6 ಶೇಕಡದಷ್ಟು ಬೆಳವಣಿಗೆ ಸಾಧಿಸಿದೆ. 2017ರ ಇದೇ ಅವಧಿಯಲ್ಲಿ ಈ ಕ್ಷೇತ್ರವು 1.3 ಶೇಕಡ ಬೆಳವಣಿಗೆ ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News