'ಕೆಸಿಎಫ್' ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

Update: 2018-07-04 10:27 GMT

ದುಬೈ, ಜು. 4: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ವತಿಯಿಂದ ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೆಸಿಎಫ್ ತನ್ನ ಐದು ಸಂವತ್ಸರಗಳನ್ನು ಪೂರೈಸಿದ ಸವಿನೆನಪಿನ ಸಂದರ್ಭ ಯುಎಇ ರಾಷ್ಟ್ರೀಯ ಸಮಿತಿ ಘೋಷಿಸಲಾಗಿದ್ದ ಐದು ಮಹತ್ತರವಾದ ಕಾರ್ಯಕ್ರಮಗಳಲ್ಲೊಂದಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧಿಕೃತ ಘೋಷಣೆಯನ್ನು ಜೂ.29 ರಂದು ಅಬುಧಾಬಿಯಲ್ಲಿ ಕೆಸಿಎಫ್ ರಾಷ್ಟ್ರೀಯ ನಾಯಕರು ಮತ್ತು ಐಸಿಎಫ್, ಆರ್.ಎಸ್.ಸಿ., ಪ್ರತಿನಿಧಿಗಳ ಸಾನಿಧ್ಯದಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮ ನಿರ್ದೇಶನ ಸಮಿತಿ ಅಧ್ಯಕ್ಷ ಶೇಖ್ ಬಾವ ಮಂಗಳೂರು, ಕಾರ್ಯಕ್ರಮವು ಸೆಪ್ಟೆಂಬರ್ ತಿಂಗಳಿನಲ್ಲಿ ಊರಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಮದುವೆಯ ಸಂಪೂರ್ಣ ಖರ್ಚನ್ನು ಕೆಸಿಎಫ್ ವಹಿಸುವುದರೊಂದಿಗೆ ವಧುವಿಗೆ ಐದು ಪವನ್ ಚಿನ್ನಾಭರಣ ಮತ್ತು ಜೋಡಿಗಳ ಮದುವೆ ವಸ್ತ್ರಗಳನ್ನೂ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆ ನಿರ್ವಹಿಸಿ ಮಾತನಾಡಿದ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ಕೆಸಿಎಫ್ ಸಮಿತಿ ಘೋಷಿಸಲಾದ ಐದು ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಐದು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಐಎಎಸ್ ಅಥವಾ ಐಪಿಎಸ್ ನಂತಹ ನಾಗರಿಕಾ ಸೇವಾ ಪರೀಕ್ಷಾ ತರಬೇತಿಗೆ ಬೇಕಾಗುವ ಸಹಾಯ ಕಲ್ಪಿಸಿಕೊಡುವ ಯೋಜನೆ ಮತ್ತು ಯುಎಇಯಲ್ಲಿ ಕನ್ನಡಿಗರಿಗಾಗಿ ಬೃಹತ್ ಕೆಸಿಎಪ್ ಮದ್ರಸ ಯೋಜನೆಯನ್ನು 2018ರಲ್ಲೇ ಪೂರೈಸಲು ಶ್ರಮಿಸುವುದಾಗಿ ತಿಳಿಸಿದರು.

ಮಾ. 30ರಂದು ಅಜ್ಮಾನಿನ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಮೈದಾನದಲ್ಲಿ ವಿವಿಧ ಸ್ಪರ್ಧೆಗಳ ಕಲರವದೊಂದಿಗೆ 'ಕರ್ನಾಟಕ ಫ್ಯಾಮಿಲಿ ಫೆಸ್ಟ್- 2018' ಅದ್ದೂರಿಯಾಗಿ ನಡೆದಿತ್ತು.

ಸಾಮೂಹಿಕ ವಿವಾಹದ ಅರ್ಜಿ ಪಡೆಯಲು ಕೆಸಿಎಫ್ ಘಟಕಗಳ ಸಾಂತ್ವನ ವಿಭಾಗ ಅಥವಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರ ವಾಟ್ಸ್ಆ್ಯಪ್ (00971557687004) ಮೂಖಾಂತರ ಸಂಪರ್ಕಿಸತಕ್ಕದ್ದು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News