3 ದಶಕ ಯುಎಇಯಲ್ಲಿ ಅಕ್ರಮ ವಾಸಗೈದ ಭಾರತೀಯ ಕುಟುಂಬ
ಶಾರ್ಜಾ, ಜು. 6: ಏಳು ಸದಸ್ಯರ ಭಾರತೀಯ ಕುಟುಂಬವೊಂದು ಯುಎಇಯ ಶಾರ್ಜಾದಲ್ಲಿ ಸುಮಾರು 3 ದಶಕಗಳ ಕಾಲ ಅಕ್ರಮವಾಗಿ ವಾಸಿಸುತ್ತಿದ್ದು, ತನ್ನ ವಾಸವನ್ನು ಕಾನೂನುಬದ್ಧಗೊಳಿಸಲು ಶ್ರಮಿಸುತ್ತಿದೆ.
ಗಂಡ, ಹೆಂಡತಿ ಮತ್ತು ಐವರು ವಯಸ್ಕ ಮಕ್ಕಳನ್ನು ಹೊಂದಿರುವ ಕೇರಳದ ಕುಟುಂಬ ಬಂಧನ ಮತ್ತು ಗಡಿಪಾರು ಭೀತಿಯನ್ನು ಎದುರಿಸುತ್ತಿದೆ.
60 ವರ್ಷದ ಮಧುಸೂದನ್ ಮತ್ತು ಅವರ ಶ್ರೀಲಂಕಾ ಪತ್ನಿ ರೋಹಿಣಿ (55)ಗೆ ನಾಲ್ವರು ಪುತ್ರಿಯರು ಸೇರಿದಂತೆ ಐವರು ಮಕ್ಕಳು.
ಮಕ್ಕಳು ಈವರೆಗೆ ಶಾಲೆಗೆ ಹೋಗಿಯೇ ಇಲ್ಲ. ತಮ್ಮ ಮಕ್ಕಳಿಗೆ ಸಾಮಾನ್ಯ ಜೀವನವನ್ನು ನೀಡಲು ಹೆತ್ತವರು ಪರದಾಡುತ್ತಿದ್ದಾರೆ.
ನಾಲ್ವರು ಪುತ್ರಿಯರಾದ ಅಶ್ವಥಿ (29), ಸಂಗೀತಾ (25), ಶಾಂತಿ (23) ಮತ್ತು ಗೌರಿ (22) ಹಾಗೂ ಮಗ ಮಿಥುನ್ (21) ಈವರಗೆ ಶಾಲೆಗೆ ಹೋಗಿಯೇ ಇಲ್ಲ. ಅವರು ಶಾರ್ಜಾದಲ್ಲಿರುವ ಎರಡು ಬೆಡ್‌ರೂಮ್‌ನ ಮುರುಕು ಮನೆಯೊಂದರಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ.
ಮಕ್ಕಳೆಲ್ಲರೂ ನಿರುದ್ಯೋಗಿಗಳು.
‘‘ಅಕ್ರಮ ವಾಸದ ಕಾರಣಕ್ಕಾಗಿ ನನ್ನ ಮಕ್ಕಳನ್ನು ಶಾಲೆಗೆ ಸೇರಿಸಲು ನನಗೆ ಸಾಧ್ಯವಾಗಿಲ್ಲ. ಅವರಲ್ಲಿ ಪಾಸ್‌ಪೋರ್ಟ್ ಕೂಡ ಇಲ್ಲ. ಅವರು ಯುಎಇಯಿಂದ ಹೊರಗೆ ಒಮ್ಮೆಯೂ ಹೋಗಿಲ್ಲ. ಅವರು ಸಾಮಾನ್ಯ ಜೀವನ ಹೊಂದಬೇಕೆಂದು ನಾನು ಬಯಸುತ್ತೇನೆ’’ ಎಂದು ಮಧುಸೂದನ್ ‘ಖಲೀಜ್ ಟೈಮ್ಸ್’ಗೆ ಹೇಳಿದ್ದಾರೆ.