ಎಚ್ಚರ!: ದುಬೈಯಲ್ಲಿ ಈ ತಪ್ಪು ಮಾಡಿದರೆ 500 ದಿರ್ಹಮ್ ದಂಡ

Update: 2018-07-09 17:12 GMT

ದುಬೈ, ಜು.9: 500 ದಿರ್ಹಮ್ ದಂಡವನ್ನು ಕಟ್ಟಲು ಬಯಸದಿದ್ದರೆ ರಸ್ತೆಗಳಲ್ಲಿ ಚುಯಿಂಗ್ ತಿಂದು ಎಸೆಯುವುದನ್ನು ನಿಲ್ಲಿಸಿ ಎಂದು ದುಬೈ ಮುನ್ಸಿಪಾಲಿಟಿ ಅಧಿಕಾರಿಗಳು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಇದಕ್ಕೂ ಮೊದಲ ಟ್ವೀಟ್ ಮಾಡಿದ್ದ ಅಧಿಕಾರಿಗಳು, 2003ರ ಸ್ಥಳೀಯ ಆದೇಶ ಸಂಖ್ಯೆ 11ರ ನೀಡಲಾಗಿರುವ ನಿಬಂಧನೆಗಳ ಪ್ರಕಾರ, ನೀವು ಒಂದು ಕಪ್ ಚಹಾ ಎಸೆದರೆ 500 ದಿರ್ಹಮ್ ದಂಡ ತೆರಬೇಕಾಗುತ್ತದೆ. ನಿಮ್ಮ ನಗರನ್ನು ಸ್ವಚ್ಛವಾಗಿಡುವುದು ನಿಮ್ಮ ಕೈಯಲ್ಲಿದೆ ಎಂದು ತಿಳಿಸಿತ್ತು. ಜನರಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರವನ್ನು ಒದಗಿಸುವ ದುಬೈ ಮುನ್ಸಿಪಾಲಿಟಿಯ ಉದ್ದೇಶದ ಭಾಗವಾಗಿ ಈ ಭಾರೀ ದಂಡವನ್ನು ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಸ್ವಚ್ಛತೆಯನ್ನು ಕಾಪಾಡುವ ಮತ್ತು ಎಮಿರೇಟ್‌ನ ಸಾಂಪ್ರದಾಯಿಕ ಗುರುತನ್ನು ಕಾಪಾಡುವಲ್ಲಿ ನಾಗರಿಕರ ಸಹಯೋಗವನ್ನೂ ಪಡೆಯುವ ಉದ್ದೇಶದಿಂದ ಈ ನಿಯಮಗಳನ್ನು ಜಾರಿ ಮಾಡಲಾಗಿದೆ. ದುಬೈಯ ಮೆಟ್ರೊ ಅಥವಾ ಅವುಗಳ ನಿಲ್ದಾಣಗಳಲ್ಲಿ ಮತ್ತು ದುಬೈಯ ಬಸ್‌ಗಳಲ್ಲಿ ಚುಯಿಂಗ್ ಗಮ್ ಜಗಿಯಲು ಅವಕಾಶವಿಲ್ಲ. ಈ ರೀತಿ ಮಾಡುವುದು ಕಂಡುಬಂದರೆ ದಂಡ ತೆರಬೇಕಾಗಬಹುದು. ಚುಯಿಂಗ್ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೆ 1,000 ದಿರ್ಹಮ್ ದಂಡವನ್ನು ತೆರಬೇಕಾದೀತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ರಸ್ತೆಗಳಲ್ಲಿ ಕಸ ಎಸೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು ಮತ್ತು ಉಗುಳುವುದರ ಮೇಲೂ ದಂಡ ವಿಧಿಸಿರುವುದಾಗಿ ದುಬೈ ಮುನ್ಸಿಪಾಲಿಟಿಯ ಜಾಲತಾಣದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News