ಯುಎಸ್ ಡಾಲರ್ ಮೌಲ್ಯ ಕುಸಿತ: ದುಬೈಯಲ್ಲಿ ದುಬಾರಿಯಾಗಲಿದೆ ಚಿನ್ನ!

Update: 2018-07-09 18:06 GMT

ದುಬೈ, ಜು.9: ಯುಎಸ್ ಡಾಲರ್‌ನ ಮೌಲ್ಯ ಸ್ವಲ್ಪ ಕುಸಿದಿರುವ ಪರಿಣಾಮವಾಗಿ ಯುಎಇಯಲ್ಲಿ ಚಿನ್ನದ ದರ ಗಗನಮುಖಿಯಾಗುತ್ತಾ ಸಾಗಿದ್ದು, ಶೀಘ್ರದಲ್ಲೇ ಪ್ರತಿ ಗ್ರಾಂಗೆ 154 ದಿರ್ಹಮ್ ತಲುಪುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂ ಗೆ 152.50 ದಿರ್ಹಮ್ ವ್ಯವಹಾರ ನಡೆಸಿತ್ತು. ಈ ದರವು ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಯುಎಸ್‌ನಲ್ಲಿ ಅನಿರೀಕ್ಷಿತವಾದ ಕೆಟ್ಟ ನಿರುದ್ಯೋಗ ದರ ಮತ್ತು ಸರಾಸರಿ ಗಂಟೆವಾರು ಆದಾಯದ ಕುಸಿತದ ಪರಿಣಾಮವಾಗಿ ಡಾಲರ್ ಮತ್ತಷ್ಟು ವೌಲ್ಯ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಚಿನ್ನ ಖರೀದಿಸುವವರು ಭಯಪಡಬೇಕಾದ ಅಗತ್ಯವಿಲ್ಲ. ಸೆಪ್ಟೆಂಬರ್ ವೇಳೆಗೆ ಮಾರುಕಟ್ಟೆ ಸಮತೋಲನ ಸಾಧಿಸಲಿದ್ದು ಚಿನ್ನದ ದರದಲ್ಲಿ ಇಳಿಕೆಯಾಗಲಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಯುಎಸ್ ಮತ್ತು ಚೀನಾದ ಮಧ್ಯೆ ನಡೆಯುತ್ತಿರುವ ವ್ಯಾಪಾರ ಸಮರದಿಂದ ಕರೆನ್ಸಿ ಮಾರುಕಟ್ಟೆ ಅಸ್ಥಿರವಾಗಿದೆ. ಇದು ಚಿನ್ನದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News