ಹೌದಿ ಬಂಡುಕೋರರಿಗೆ ಹಿಝ್ಬುಲ್ಲಾ ತರಬೇತಿ: ಅರಬ್ ಮಿತ್ರಕೂಟ ಆರೋಪ

Update: 2018-07-10 16:22 GMT

ರಿಯಾದ್, ಜು. 10: ಹೌದಿ ಬಂಡುಕೋರರಿಗೆ ಹಿಝ್ಬುಲ್ಲಾ ನೀಡಿರುವ ಸಂಪರ್ಕ ವ್ಯವಸ್ಥೆಯೊಂದನ್ನು ಅರಬ್ ಮಿತ್ರಕೂಟವು ಇತ್ತೀಚೆಗೆ ನಾಶಪಡಿಸಿದೆ ಎಂದು ಮಿತ್ರಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ಸೋಮವಾರ ಹೇಳಿದ್ದಾರೆ.

ಮುಸ್ಬಾ, ಮರನ್, ರಝಾ, ಅಲ್-ಮಕಲ್ ಮತ್ತು ಅಲ್-ನೋಅ ಪರ್ವತಗಳಲ್ಲಿದ್ದ ಐದು ಸಂಪರ್ಕ ವ್ಯವಸ್ಥೆಗಳನ್ನು ಮಿತ್ರಕೂಟದ ಪಡೆಗಳು ನಾಶಪಡಿಸಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದರು.

ಇರಾನ್ ಬೆಂಬಲಿತ ಹೌದಿ ಬಂಡುಕೋರರಿಗೆ ‘ವಿದೇಶಿ ಪರಿಣತರು’ ಗುಹೆಗಳಲ್ಲಿ ತರಬೇತಿ ನೀಡುತ್ತಿರುವುದನ್ನು ಸೂಚಿಸುವ ಪುರಾವೆಗಳೂ ಮಿತ್ರಕೂಟಕ್ಕೆ ಸಿಕ್ಕಿದೆ ಎಂದರು. ಹೌದಿ ಬಂಡುಕೋರರಿಗೆ ಹಿಝ್ಬುಲ್ಲಾ ತರಬೇತಿ ನೀಡುತ್ತಿರುವುದಕ್ಕೆ ಸಂಬಂಧಿಸಿದ ಪುರಾವೆಯೂ ಮಿತ್ರಕೂಟಕ್ಕೆ ಲಭಿಸಿದೆ ಎಂದರು.

ಯಮನ್‌ನ ವಿವಿಧ ರಾಜ್ಯಗಳಿಗೆ ಮಾನವೀಯ ನೆರವು ಸರಾಗವಾಗಿ ಹರಿದುಹೋಗುವಂತೆ ಮಾಡುವ ಪ್ರಯತ್ನಗಳನ್ನು ಮುಂದುವರಿಸಲಾಗುತ್ತಿದೆ ಎಂದು ಅಲ್-ಮಾಲಿಕಿ ತಿಳಿಸಿದರು. ಇದಕ್ಕೂ ಮೊದಲು ಮಾನವೀಯ ನೆರವು ಜನರಿಗೆ ತಲುಪುವುದಕ್ಕೆ ಹೌದಿ ಬಂಡುಕೋರರು ತಡೆಯೊಡ್ಡಿದ್ದರು ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News