ಬಲಗೊಳ್ಳುತ್ತಿರುವ ದಿರ್ಹಮ್: ಭಾರತೀಯ ಉದ್ಯೋಗಿಗಳ ಮುಖಗಳಲ್ಲಿ ಮಂದಹಾಸ

Update: 2018-07-10 16:27 GMT

ದುಬೈ, ಜು. 10: 2018ರ ದ್ವಿತೀಯಾರ್ಧದಲ್ಲಿ ಯುಎಇ ಕರೆನ್ಸಿ ದಿರ್ಹಮ್ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಫಿಲಿಪ್ಪೀನ್ಸ್ ದೇಶಗಳ ಕರೆನ್ಸಿಗಳ ವಿರುದ್ಧ ಬಲಗೊಳ್ಳುತ್ತಿದೆ ಎಂದು ಕರೆನ್ಸಿ ವಿಶ್ಲೇಷಕರು ಹೇಳುತ್ತಾರೆ. ಇದು ಮುಖ್ಯವಾಗಿ ಯುಎಇಯಲ್ಲಿ ಕೆಲಸ ಮಾಡುವ ಏಶ್ಯ ದೇಶಗಳ ಉದ್ಯೋಗಿಗಳ ಸಂತೋಷಕ್ಕೆ ಕಾರಣವಾಗಿದೆ.

ಈ ವರ್ಷದ ಪ್ರಥಮಾರ್ಧದಲ್ಲಿ, ಡಾಲರ್‌ನ ಮಾದರಿಯಲ್ಲೇ ಏಶ್ಯ ಮತ್ತು ಅಭಿವೃದ್ಧಿಶೀಲ ದೇಶಗಳ ಕರೆನ್ಸಿಗಳ ವಿರುದ್ಧ ದಿರ್ಹಮ್ ಬಲಗೊಂಡಿತ್ತು. ಹಾಗಾಗಿ, ಈ ಅವಧಿಯಲ್ಲಿ ವಿದೇಶಿ ಉದ್ಯೋಗಿಗಳು ಕಡಿಮೆ ದಿರ್ಹಮ್ ಮೂಲಕ ಹೆಚ್ಚು ಹಣವನ್ನು ತಮ್ಮ ತಾಯ್ನೋಡುಗಳಿಗೆ ಕಳುಹಿಸಲು ಸಾಧ್ಯವಾಗಿತ್ತು.

ಕಳೆದ ಹಲವು ತಿಂಗಳುಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಕರೆನ್ಸಿಗಳ ಮೌಲ್ಯ ಡಾಲರ್ ವಿರುದ್ಧ ಐತಿಹಾಸಿಕ ಮಟ್ಟಕ್ಕೆ ಕುಸಿದಿದೆ. ಹಾಗಾಗಿ ಕಳೆದ ತಿಂಗಳು ಭಾರತೀಯ ರೂಪಾಯಿಯ ಬೆಲೆ ಯುಎಇ ದಿರ್ಹಮ್ ವಿರುದ್ಧ 18.8 ಆಗಿತ್ತು. ಇದೇ ಅವಧಿಯಲ್ಲಿ ದಿರ್ಹಮ್ ವಿರುದ್ಧ ಪಾಕ್ ರೂಪಾಯಿ ಬೆಲೆ 33ಕ್ಕೆ ಇಳಿದಿತ್ತು.

ಜೂನ್ ಮಧ್ಯ ಭಾಗದ ಅವಧಿಯಲ್ಲಿ ಯುಎಇ ದಿರ್ಹಮ್ ವಿರುದ್ಧ ಬಾಂಗ್ಲಾದೇಶದ ಕರೆನ್ಸಿ ಟಾಕಾ ಮೌಲ್ಯ 23ರ ಸಾರ್ವಕಾಲಿಕ ಕುಸಿತ ಕಂಡಿದೆ.

ಅದೇ ವೇಳೆ, ಕಳೆದ ತಿಂಗಳು ಫಿಲಿಪ್ಪೀನ್ಸ್ ಕರೆನ್ಸಿ ಪೀಸೊದ ಮೌಲ್ಯ ದಿರ್ಹಮ್ ವಿರುದ್ಧ 14.6ಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News