ಅಬುಧಾಬಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯರ ಕಳೇಬರಗಳು ಅದಲು ಬದಲು

Update: 2018-07-14 12:29 GMT
ಸಾಂದರ್ಭಿಕ ಚಿತ್ರ

ಅಬುಧಾಬಿ,ಜು.14 : ಎರಡು ದಿನಗಳ ಅಂತರದಲ್ಲಿ ಅಬುಧಾಬಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯ ವ್ಯಕ್ತಿಗಳ ಮೃತದೇಹಗಳು ಅದಲು ಬದಲಾಗಿ ಕೇರಳದ ಒಂದು ಕುಟುಂಬ ತಮ್ಮ ಸದಸ್ಯನ ಕಳೇಬರ ಪಡೆಯುವ ಬದಲು ತಮಿಳುನಾಡಿನ ವ್ಯಕ್ತಿಯೊಬ್ಬನ ಮೃತದೇಹ ಪಡೆದಿದೆ.

ತಮಿಳುನಾಡಿನ 39 ವರ್ಷದ ಕಮಚ್ಚಿ ಕೃಷ್ಣನ್ ಎಂಬಾತನ ಮೃತದೇಹ ಕೇರಳಿಗ ನಿಧಿನ್ ಒಥಯೊತ್ ಕೊಟ್ಟಾರನ್ (29) ಎಂಬಾತನ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.

ಶುಕ್ರವಾರ ಶವಪೆಟ್ಟಿಗೆ ಕೇರಳದ ಕಲ್ಲಿಕೋಟೆಗೆ ಆಗಮಿಸಿದಾಗ ನಿಧಿನ್ ಕುಟುಂಬಕ್ಕೆ ಅದು ಆತನ ಕಳೇಬರವಲ್ಲವೆಂದು ತಿಳಿದು ಬಂದಿತ್ತು. ಕಳೆದೊಂದು ವಾರದಿಂದ ನಿಧಿನ್ ಕಳೇಬರಕ್ಕಾಗಿ ಕಾದು ಕುಳಿತಿರುವ ಆತನ ದುಃಖತಪ್ತ ಹೆತ್ತವರು ಈ ಘಟನೆಯಿಂದ ಮತ್ತಷ್ಟು ಆಘಾತಕ್ಕೀಡಾಗಿದ್ದಾರೆನ್ನಲಾಗಿದೆ.

ರುವೈಸ್ ಎಂಬಲ್ಲಿ ಸೈಟ್ ಸುಪರ್‍ವೈಸರ್ ಆಗಿ ಕೆಲಸ ಮಾಡುತ್ತಿದ್ದ ನಿಧಿನ್ ಜುಲೈ 5ರಂದು ಮೃತಪಟ್ಟಿದ್ದರೆ, ಕೃಷ್ಣನ್ ಜುಲೈ 7ರಂದು ಮೃತಪಟ್ಟಿದ್ದಾರೆ. ಇಬ್ಬರ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ನಿಧಿನ್ ಕಳೇಬರದ ಬದಲು ಕೃಷ್ಣನ್ ಕಳೇಬರ ಆತನ ಹುಟ್ಟೂರಿಗೆ ಸಾಗಿಸಲಾಗಿದ್ದರಿಂದ ಇದೀಗ ಕೃಷ್ಣನ್ ಕಳೇಬರ ನಿಧಿನ್ ಹುಟ್ಟೂರಾದ ವಯನಾಡ್ ನ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ನಿಧಿನ್ ಕಳೇಬರ ಆತನ ಕುಟುಂಬಕ್ಕೆ ಆದಷ್ಟು ಬೇಗ ಹಸ್ತಾಂತರಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೇಬರಗಳು ಹೇಗೆ ಅದಲು ಬದಲಾದವೆಂದು ತಮಗೆ ತಿಳಿಯುತ್ತಿಲ್ಲ ಎಂದು ಭಾರತೀಯ ದೂತಾವಾಸದ ಅಧಿಕಾರಿಗಳು ಹೇಳಿದ್ದಾರೆ. ಕಳೇಬರಗಳಿಗೆ ಎಂಬಾಲ್ಮಿಂಗ್ ಪ್ರಕ್ರಿಯೆ ನಡೆಸುವಾಗ ಹೀಗಾಗಿರಬಹುದೆಂದು ಅಬುಧಾಬಿಯ ಏರ್ ಇಂಡಿಯಾ ಮ್ಯಾನೇಜರ್ ರಂಜನ್ ದತ್ತಾ ಹೇಳಿದ್ದಾರೆ.

ನಿಧಿನ್ ಮೃತದೇಹವನ್ನು ಕಲ್ಲಿಕೋಟೆಗೆ ತೆರಳುತ್ತಿದ್ದ ಏರ್ ಇಂಡಿಯಾದ ವಿಮಾನದಲ್ಲಿ ಕಳುಹಿಸಲು ಏರ್ಪಾಟು ಮಾಡಲಾಗಿದ್ದರೆ, ಕೃಷ್ಣನ್ ಕಳೇಬರವನ್ನು ಅದೇ ದಿನ ಎತಿಹಾದ್ ವಿಮಾನದಲ್ಲಿ ಚೆನ್ನೈಗೆ ಕಳುಹಿಸಲು ಏರ್ಪಾಟು ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News