ದುಬೈ ಶಾಲೆಗಳಿಗೆ 1480 ಹೊಸ ಶಿಕ್ಷಕರು; 13 ಹೊಸ ಶಾಲೆಗಳು

Update: 2018-07-14 18:01 GMT

ದುಬೈ, ಜು. 14: ಬೇಸಿಗೆ ರಜೆಯಲ್ಲಿರುವ ದುಬೈಯ ಶಾಲೆಗಳು ಸೆಪ್ಟಂಬರ್ ತಿಂಗಳಿನಲ್ಲಿ ಪುನರಾರಂಭಗೊಳ್ಳಲಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ಹೊಸದಾಗಿ 1480 ಶಿಕ್ಷಕರನ್ನು ನೇಮಕಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕೃತ ಮೂಲಗಳು ನೀಡಿವೆ.

ಇದರೊಂದಿಗೆ ದುಬೈಯಲ್ಲಿರುವ ಶಿಕ್ಷಕರ ಸಂಖ್ಯೆ ಒಟ್ಟು 19,600ಕ್ಕೆ ಏರಲಿದೆ. ಕಳೆದ ವರ್ಷ ದುಬೈಯ ವಿವಿಧ ಶಾಲೆಗಳಲ್ಲಿ ಕರ್ತವ್ಯಕ್ಕೆ ನೇಮಕಗೊಂಡ ಶಿಕ್ಷಕರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಈ ವರ್ಷ ನಡೆದ ನೇಮಕಾತಿಯು ಕಡಿಮೆ ಎಂಬುದನ್ನು ಅಂಕಿ ಅಂಶಗಳು ಸ್ಪಷ್ಟಪಡಿಸುತ್ತಿವೆ.

ಆಕರ್ಷಕ ವೇತನ, ಉತ್ತಮ ಜೀವನ ಮಟ್ಟ, ವಸತಿ, ಇಲ್ಲಿ ಸಿಗುವ ಅನುಭವ ಹಾಗೂ ವೃತ್ತಿಯಲ್ಲಿ ಆಗುವ ಪ್ರಗತಿ ಮುಂತಾದ ಕಾರಣಗಳಿಗಾಗಿ ವಿದೇಶಿ ಶಿಕ್ಷಕರು ಇಲ್ಲಿ ಬಂದು ಉದ್ಯೋಗ ಅರಸುತ್ತಾರೆ. ಇಲ್ಲಿರುವ ವಿವಿಧ ಅಂತರ್‌ರಾಷ್ಟ್ರೀಯ ಶಾಲೆಗಳಲ್ಲಿ ಅಮೆರಿಕ, ಇಂಗ್ಲೆಂಡ್, ಕೆನಡ, ಆಸ್ಟ್ರೇಲಿಯ, ಐರ್‌ಲ್ಯಾಂಡ್ ಸೇರಿದಂತೆ ಇಂಗ್ಲಿಷ್ ಮಾತೃಭಾಷೆಯಾಗಿರುವ ಹಲವು ರಾಷ್ಟ್ರಗಳ ಶಿಕ್ಷಕರು ದುಡಿಯುತ್ತಿದ್ದಾರೆ. ಅಲ್ಲದೆ ವಿವಿಧ ಗಲ್ಫ್ ರಾಷ್ಟ್ರಗಳು, ಅರಬ್ ರಾಷ್ಟ್ರಗಳು, ಭಾರತ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಇನ್ನಿತರ ರಾಷ್ಟ್ರಗಳ ಶಿಕ್ಷಕರೂ ಉದ್ಯೋಗದಲ್ಲಿದ್ದಾರೆ. ಜೊತೆಗೆ ಇನ್ನೂ ಹೆಚ್ಚಿನ ಜನರು ಉದ್ಯೋಗದ ಲಕ್ಷ್ಯವನ್ನು ಇಟ್ಟುಕೊಂಡು ದುಬೈ ವಿಮಾನವೇರುತ್ತಿದ್ದಾರೆ. ಯುಎಇಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿರುವ ‘ಜೆಮ್ಸ್ ಎಜುಕೇಶನ್’ ಎಂಬ ಬಲಾಢ್ಯ ಸಂಸ್ಥೆಯು 2018-19ನೇ ಶೈಕ್ಷಣಿಕ ವರ್ಷಕ್ಕೆ 1300 ಶಿಕ್ಷಕರನ್ನು ತನ್ನ ಜಾಲಕ್ಕೆ ಸೇರಿಸಿಕೊಳ್ಳಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಕಳೆದ ವರ್ಷ 1,700 ಶಿಕ್ಷಕರನ್ನು ಅದು ನೇಮಿಸಿತ್ತು.

‘ತಾಲೀಮ್’ ಸಂಸ್ಥೆಗೆ 180 ಹೊಸ ಶಿಕ್ಷಕರು ಈ ಬಾರಿ ಸೇರಲಿದ್ದು, ಕಳೆದ ವರ್ಷ ಇದು 216 ಆಗಿತ್ತು. ಇಲ್ಲಿನ ಜ್ಞಾನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಾಧಿಕಾರ (ಕೆಎಚ್‌ಡಿಎ)ದ ಅಂಕಿ-ಅಂಶಗಳ ಪ್ರಕಾರ, ದುಬೈಯ ಖಾಸಗಿ ಶಾಲೆಗಳಲ್ಲಿ ಒಟ್ಟು 19,682 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 3,150 ಮಂದಿ ಸಹಾಯಕ ಶಿಕ್ಷಕರು. ಇಲ್ಲಿನ ಎಲ್ಲ ಶಾಲೆಗಳು ತಮ್ಮ ಸಂಸ್ಥೆಗಳಲ್ಲಿರುವ ಶಿಕ್ಷಕರ ಪೂರ್ಣ ಮಾಹಿತಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಲು ವಿಳಂಬಿಸಿರುವ ಹಿನ್ನೆಲೆಯಲ್ಲಿ ಈ ಅಂಕಿ-ಅಂಶ ನೂರು ಶೇಕಡಾ ಸಮರ್ಪಕ ಎನ್ನಲು ಸಾಧ್ಯವಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.

ಸುಮಾರು 1300 ಶಿಕ್ಷಕರು ಹಾಗೂ ಇತರ ವಿಭಾಗದ ಉದ್ಯೋಗಿಗಳು ಜೆಮ್ಸ್ ಎಜುಕೇಶನ್ ಸಂಸ್ಥೆಯನ್ನು ಸೇರಲಿದ್ದಾರೆ. ಯುಎಇಯಲ್ಲಿನ ಎಲ್ಲಾ ಶಿಕ್ಷಕರನ್ನು ಸ್ವಾಗತಿಸುವ ಕಾರ್ಯಕ್ರಮ ದುಬೈಯಲ್ಲಿ ಸಂಘಟಿಸಲಾಗುತ್ತಿದ್ದು, ಈ ಸಂದರ್ಭ ಅನೇಕ ಮನೋರಂಜನಾ ಕಾರ್ಯಕ್ರಮಗಳು ಹಾಗೂ ವೃತ್ತಿಮಾರ್ಗದರ್ಶನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು.

ಬ್ರೆಂಡನ್ ಲಾ, ಉಪಾಧ್ಯಕ್ಷಕರು, ಬ್ರಿಟಿಷ್ ಕ್ಲಸ್ಟರ್ ಜೆಮ್ಸ್ ಎಜುಕೇಶನ್

ಉತ್ತಮ ಜೀವನ ಮಟ್ಟದ ಆಕರ್ಷಣೆ: 

ಉತ್ತಮ ಜೀವನ ಮಟ್ಟ ಹಾಗೂ ಉತ್ತಮ ವೇತನ ಸೌಲಭ್ಯಗಳೇ ವಿದೇಶಗಳ ವಿವಿಧ ಕ್ಷೇತ್ರಗಳ ಉದ್ಯೋಗಿಗಳು ದುಬೈಗೆ ಆಗಮಿಸುವ ಹಿಂದಿರುವ ಪ್ರಮುಖ ಕಾರಣ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಪ್ಯಾಕೇಜ್‌ಗಳಲ್ಲಿ ಕಡಿತವೇನಾದರೂ ಸಂಭವಿಸಿದರೆ ಉದ್ಯೋಗಿಗಳ ಸಂಖ್ಯೆಯನ್ನು ಬಾಧಿಸಬಹುದು.

ಏನಿದ್ದರೂ ಉತ್ತಮ ಶಿಕ್ಷಣ ಪ್ರತಿಯೊಂದು ರಾಷ್ಟ್ರದ ಜೀವನಾಡಿ ಎಂಬುದೇ ಇಲ್ಲಿ ಮಹತ್ವದ ವಿಚಾರ.

Writer - ವರದಿ: ಸಿರಾಜ್ ಅರಿಯಡ್ಕ

contributor

Editor - ವರದಿ: ಸಿರಾಜ್ ಅರಿಯಡ್ಕ

contributor

Similar News