ಯುಎಇ: ಅಕ್ರಮ ನಿವಾಸಿಗಳು ಸಕ್ರಮಗೊಳ್ಳಲು ಪ್ರಚಾರಾಂದೋಲನ

Update: 2018-07-23 15:56 GMT

ದುಬೈ, ಜು. 23: ಅಕ್ರಮ ವಾಸಿಗಳಿಗೆ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡುವ ಯೋಜನೆಯ ಬಗ್ಗೆ ಯುಎಇಯ ಕೇಂದ್ರೀಯ ಗುರುತು ಮತ್ತು ಪೌರತ್ವ ಪ್ರಾಧಿಕಾರವು ಮಾಧ್ಯಮ ಅಭಿಯಾನವೊಂದನ್ನು ಆರಂಭಿಸಿದೆ.

‘ನಿಮ್ಮ ತಪ್ಪನ್ನು ಸರಿಪಡಿಸಿಕೊಂಡು ಸರಕ್ಷಿತರಾಗಿರಿ’ (ಪ್ರೊಟೆಕ್ಟ್ ಯುವರ್‌ಸೆಲ್ಫ್ ಬೈ ಮೋಡಿಫೈಯಿಂಗ್ ಯುವರ್ ಸ್ಟೇಟಸ್) ಎಂಬ ಹೆಸರಿನ ಯೋಜನೆಯು, ಅಕ್ರಮ ವಾಸಿಗಳಿಗೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಅಥವಾ ದಂಡ ಅಥವಾ ಕಾನೂನು ತೊಡಕಿಲ್ಲದೆ ದೇಶ ತೊರೆಯಲು ಅವಕಾಶ ನೀಡುತ್ತದೆ.

ಕ್ಷಮಾದಾನ ಬಯಸುವವರನ್ನು ಯುಎಇ ಆದ್ಯಂತ ಇರುವ 9 ವಲಸೆ ಕೇಂದ್ರಗಳಲ್ಲಿ ನೋಂದಾಯಿಸಲಾಗುವುದು. ಅಬುಧಾಬಿಯ ನೋಂದಣಿ ಕೇಂದ್ರವು ಶಾಹಮ, ಅಲ್ ಐನ್ ಮತ್ತು ಗಾರ್ಬಿಯಗಳಲ್ಲಿರುವ ವಲಸೆ ಕಚೇರಿಗಳಲ್ಲಿರುತ್ತದೆ. ದುಬೈಯ ನೋಂದಣಿ ಕೇಂದ್ರವು ಅಲ್ ಅವೀರ್‌ನಲ್ಲಿರುತ್ತದೆ. ಇತರ ಎಮಿರೇಟ್‌ಗಳ ನೋಂದಣಿ ಕೇಂದ್ರವು ಪ್ರಮುಖ ವಲಸೆ ಕಚೇರಿಗಳಲ್ಲಿರುತ್ತದೆ.

ಕ್ಷಮಾದಾನ ನೋಂದಣಿ ಕೇಂದ್ರಗಳು ರವಿವಾರದಿಂದ ಗುರುವಾರದವರೆಗೆ ಬೆಳಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ತೆರೆದಿರುತ್ತದೆ.

ಕ್ಷಮಾದಾನ ಅವಧಿ ಆಗಸ್ಟ್ 1ರಿಂದ ಅಕ್ಟೋಬರ್ 31

ಅಕ್ರಮ ವಾಸವನ್ನು ಸರಿಪಡಿಸುವ ಅವಧಿ ಆಗಸ್ಟ್ 1ರಿಂದ ಆರಂಭಗೊಂಡು ಅಕ್ಟೋಬರ್ 31ರವರೆಗೆ ಇರುತ್ತದೆ.

ತನ್ನ ಪ್ರವಾಸ ವೀಸಾ ಅಥವಾ ವಾಸ್ತವ್ಯ ವೀಸಾಗಳ ಅವಧಿಯನ್ನು ಮೀರಿ ಯುಎಇಯಲ್ಲಿ ವಾಸಿಸುತ್ತಿರುವ ಜನರು ಅಥವಾ ಕಾರ್ಮಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ತಮ್ಮ ದಾಖಲೆಯನ್ನು ನವೀಕರಿಸಿಕೊಳ್ಳುವ ಅಥವಾ ದೇಶ ತೊರೆಯುವ ಅವಕಾಶ ಇರುತ್ತದೆ.

ಅವರು ಯುಎಇಯಲ್ಲೇ ಮುಂದುವರಿಯಲು ನಿರ್ಧರಿಸಿದರೆ, ಅಕ್ರಮ ವಾಸ್ತವ್ಯಕ್ಕಾಗಿ ಅವರು ಪಾವತಿಸಬೇಕಾಗಿದ್ದ ಶುಲ್ಕ ಅಥವಾ ದಂಡವನ್ನು ಮನ್ನಾ ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News