ಸೌದಿ ಅರೇಬಿಯದ ಎರಡು ತೈಲ ಹಡಗುಗಳ ಮೇಲೆ ಉಗ್ರರ ದಾಳಿ: ತೈಲ ಸರಬರಾಜಿನಲ್ಲಿ ವ್ಯತ್ಯಯ

Update: 2018-07-26 18:26 GMT

ರಿಯಾದ್, ಜು.26: ಸೌದಿ ಅರೇಬಿಯಕ್ಕೆ ಸೇರಿದ ಎರಡು ತೈಲ ಹಡಗುಗಳ ಮೇಲೆ ಯೆಮನ್‌ನ ಹೌತಿ ಉಗ್ರರು ಬುಧವಾರ ದಾಳಿ ನಡೆಸಿದ್ದು ಘಟನೆಯಲ್ಲಿ ಒಂದು ಹಡಗಿಗೆ ಸ್ವಲ್ಪ ಹಾನಿಯಾಗಿದೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.

 ಬುಧವಾರ ರಾತ್ರಿ 9.15ರ ಸುಮಾರಿಗೆ ಕೆಂಪು ಸಮುದ್ರದಲ್ಲಿ ಯೆಮನ್‌ನ ಹೊದೈದ ಬಂದರಿನ ಪಶ್ಚಿಮದಲ್ಲಿ ಸೌದಿಗೆ ಸೇರಿದ ಎರಡು ತೈಲ ಟ್ಯಾಂಕರ್ ಹಡಗುಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸೌದಿ ಮತ್ತು ಎಮಿರೆಟಿ ಮೈತ್ರಿಯ ವಕ್ತಾರರು ತಿಳಿಸಿದ್ದಾರೆ. ಆದರೆ ದಾಳಿಗೊಳಗಾದ ಹಡಗುಗಳ ವಿವರ ಹಾಗೂ ದಾಳಿ ನಡೆದ ರೀತಿಯ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 ಘಟನೆಯಲ್ಲಿ ಒಂದು ತೈಲ ಟ್ಯಾಂಕರ್‌ಗೆ ಸ್ವಲ್ಪ ಹಾನಿಯಾಗಿದೆ. ಆದರೆ ಉಗ್ರನಿಗ್ರಹ ಪಡೆಯ ಸಕಾಲಿಕ ಕಾರ್ಯಾಚರಣೆಯಿಂದ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಡಗುಗಳನ್ನು ಸೌದಿ ಶಿಪ್ಪಿಂಗ್ ಸಂಸ್ಥೆ ಬಹ್ರಿ ನಿಭಾಯಿಸುತ್ತಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.

ಘಟನೆಯ ನಂತರ ಹೇಳಿಕೆ ನೀಡಿರುವ ಯುಎಇ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಡಾ. ಅನ್ವರ್ ಮುಹಮ್ಮದ್ ಗರ್ಗಶ್, ಹೊದೈದವನ್ನು ಹೌತಿ ಉಗ್ರರಿಂದ ಮುಕ್ತಗೊಳಿಸುವ ಅನಿವಾರ್ಯವನ್ನು ಈ ಘಟನೆ ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.

ಬಾಕ್ಸ್:

ತೈಲ ಸಾಗಾಟ ಸ್ಥಗಿತ

ಘಟನೆಯ ನಂತರ ಕೆಂಪುಸಮುದ್ರದಲ್ಲಿರುವ ಹಡಗು ಸಾರಿಗೆ ಮಾರ್ಗ ಬಬ್ ಅಲ್ ಮಂಡೆಬ್ ಮೂಲಕ ತೈಲ ಸರಬರಾಜು ಮಾಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸೌದಿ ಅರೇಬಿಯ ಗುರುವಾರ ತಿಳಿಸಿದೆ.

ಬಬ್ ಅಲ್ ಮಂಡೆಬ್ ಮೂಲಕ ತೈಲ ಸಾಗಾಟ ಮಾಡುವುದು ಸುರಕ್ಷಿತ ಎಂದು ಸ್ಪಷ್ಟವಾಗುವವರೆಗೆ ಆ ಮಾರ್ಗವಾಗಿ ನಡೆಸಲಾಗುವ ಎಲ್ಲ ತೈಲ ಸರಬರಾಜುಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸೌದಿ ಇಂಧನ ಸಚಿವ ಖಾಲಿದ್ ಅಲ್ ಫಲಿಹ್ ತಿಳಿಸಿದ್ದಾರೆ.

ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿ ಅರಬಿ ಸಮುದ್ರದಲ್ಲಿ ಸೇರುವ ಪ್ರದೇಶವಾಗಿರುವ ಬಬ್ ಅಲ್ ಮಂಡೆಬ್ ಸಂಧಿ ಕೇವಲ 20 ಕಿ.ಮೀ. ವಿಸ್ತಾರವಿದ್ದು ಇದರಿಂದಾಗಿ ಈ ಮಾರ್ಗವಾಗಿ ಸಾಗುವ ನೂರಾರು ಹಡಗುಗಳು ದಾಳಿಗೆ ಸುಲಭ ಗುರಿಯಾಗಿವೆ.

ಶಾಂತಿ ಪ್ರಕ್ರಿಯೆ ಮೇಲೆ ಹೊಡೆತ: ಯೆಮನ್ ಉಪಾಧ್ಯಕ್ಷ

ಅಂತರ್‌ರಾಷ್ಟ್ರೀಯ ಜಲಪ್ರದೇಶಗಳಲ್ಲಿ ಹಡಗುಗಳ ಮೇಲೆ ಹೌತಿ ಉಗ್ರರು ನಡೆಸುತ್ತಿರುವ ನಿರಂತರ ದಾಳಿಯಿಂದ ಶಾಂತಿ ಪ್ರಕ್ರಿಯೆಯ ಮೇಲೆ ಹೊಡೆತ ಬಿದ್ದಿದೆ ಎಂದು ಯೆಮನ್ ಉಪಾಧ್ಯಕ್ಷ ಅಲಿ ಮೊಹ್ಸಿನ್ ಅಲ್ ಅಹ್ಮರ್ ಅಭಿಪ್ರಾಯಿಸಿದ್ದಾರೆ.

ಈ ರೀತಿ ಹಡಗುಗಳ ಮೇಲೆ ದಾಳಿ ನಡೆಸುವ ಮೂಲಕ ಉಗ್ರರು ಶಾಂತಿ ಪ್ರಕ್ರಿಯೆಗೆ ತೊಂದರೆ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉಗ್ರರು ದಾಳಿ ನಡೆಸಲು ಹೊದೈದ ಬಂದರನ್ನು ಬಳಸುವುದನ್ನು ಮುಂದುವರಿಸಿದ್ದಾರೆ ಎಂದು ಅಲ್ ಅಹ್ಮರ್ ತಿಳಿಸಿದ್ದಾರೆ.

ಇತರ ಅರಬ್ ದೇಶಗಳ ನಾಯಕರೂ ಈ ದಾಳಿಯನ್ನು ಖಂಡಿಸಿದ್ದು ಹೊದೈದವನ್ನು ಹೌತಿಗಳಿಂದ ಸ್ವತಂತ್ರಗೊಳಿಸುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಬಬ್ ಅಲ್ ಮಂಡಬ್ ಸಂಧಿಯ ಮೂಲಕ ತೈಲ ಹಡಗುಗಳ ಸಾಗಾಟದ ಮೇಲೆ ನಿಷೇಧ ಹೇರಲು ಚಿಂತಿಸುತ್ತಿರುವುದಾಗಿ ಕುವೈಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News