ಹಜ್ ಯಾತ್ರಿಕರ ಸೇವೆಗಾಗಿ 1,92,254 ಸಿಬ್ಬಂದಿ

Update: 2018-08-16 16:18 GMT

ಜಿದ್ದಾ, ಆ. 16: ಈ ವರ್ಷದ ಹಜ್ ಋತುವಿನ ಅಂಕಿಸಂಖ್ಯೆಗಳ ಕ್ಯಾಲೆಂಡರನ್ನು ಸೌದಿ ಅರೇಬಿಯದ ಅಂಕಿಸಂಖ್ಯೆಗಳ ಮಹಾ ಪ್ರಾಧಿಕಾರ ಮಂಗಳವಾರ ಬಿಡುಗಡೆಗೊಳಿಸಿದೆ.

ಯಾತ್ರಿಕರಿಗೆ ಒದಗಿಸುವ ಸಾಮಾನ್ಯ ಸೇವೆಗಳ ಭಾಗವಾಗಿ 136ಕ್ಕೂ ಅಧಿಕ ಪ್ರಮುಖ ಸೇವೆಗಳನ್ನು ಈ ಕ್ಯಾಲೆಂಡರ್ ಪಟ್ಟಿ ಮಾಡಿದೆ.

ಪುರುಷರು ಮತ್ತು ಮಹಿಳೆಯರು ಸೇರಿದಂತೆ 1,92,254 ಉದ್ಯೋಗಿಗಳು ಈ ಸೇವೆಗಳನ್ನು ಯಾತ್ರಿಕರಿಗೆ ನೀಡುತ್ತಾರೆ. ಹಜ್ ಅವಧಿಯಲ್ಲಿ 1,89,113 ಪುರುಷರು ಮತ್ತು 3,141 ಮಹಿಳೆಯರು ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ.

ಈ ಸೇವೆಗಳನ್ನು ನೀಡಲು 7,995 ಕಾರುಗಳು, 1,583 ಮೋಟರ್‌ ಬೈಕ್‌ಗಳು, 13,349 ವಯರ್‌ಲೆಸ್ ಉಪಕರಣಗಳು ಮತ್ತು 3,760 ಕಂಪ್ಯೂಟರ್‌ಗಳನ್ನು ಬಳಸಲಾಗುತ್ತದೆ.

ಮಕ್ಕಾ, ಮದೀನಾ ಮತ್ತು ಇತರ ಪವಿತ್ರ ಸ್ಥಳಗಳಲ್ಲಿ ಭದ್ರತೆ ಮತ್ತು ಸಾರಿಗೆ ನಿಯಂತ್ರಣಕ್ಕಾಗಿ 52 ಪೊಲೀಸ್ ಠಾಣೆಗಳು, 280 ಸಾರಿಗೆ ಕೇಂದ್ರಗಳು ಮತ್ತು 75 ಭದ್ರತಾ ಗಡಿ ದ್ವಾರಗಳನ್ನು ಸ್ಥಾಪಿಸಲಾಗಿದೆ.

ತನ್ನ ಮುನ್ನೆಚ್ಚರಿಕೆ ಜಾಗೃತಿ ಅಭಿಯಾನವನ್ನು ಜಾರಿಗೊಳಿಸಲು ನಾಗರಿಕ ರಕ್ಷಣಾ ಪಡೆಗಳು 15,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿವೆ.

ಪಾಸ್‌ಪೋರ್ಟ್ ಕೇಂದ್ರಗಳಲ್ಲಿ 5,000 ಸಿಬ್ಬಂದಿ

ಹಜ್ ಯಾತ್ರಿಕರ ಸ್ವಾಗತಕ್ಕಾಗಿ ಪಾಸ್‌ಪೋರ್ಟ್ ಕೇಂದ್ರಗಳನ್ನು ಸಜ್ಜುಗೊಳಿಸಲು ಪಾಸ್‌ಪೋರ್ಟ್ ನಿಯಂತ್ರಣ ನಿರ್ದೇಶನಾಲಯವು 5,000ಕ್ಕಿಂತಲೂ ಅಧಿಕ ಸಿಬ್ಬಂದಿ, ತಾಂತ್ರಿಕ ವ್ಯಕ್ತಿಗಳು ಮತ್ತು ಖಾಸಗಿ ವ್ಯಕ್ತಿಗಳನ್ನು ನಿಯೋಜಿಸಿದೆ.

ಇಲೆಕ್ಟ್ರಾನಿಕ್ ಹಜ್ ಪರ್ಮಿಟ್‌ಗಳನ್ನು ಓದಬಹುದಾದ ಉಪಕರಣಗಳನ್ನು ಪಡೆಯಲು ಹಾಗೂ ಸಿದ್ಧಗೊಳಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರವು 1,355ಕ್ಕೂ ಅಧಿಕ ತಾಂತ್ರಿಕರು ಮತ್ತು ಆಡಳಿತಾತ್ಮಕ ಅಧಿಕಾರಿಗಳನ್ನು ಒದಗಿಸಿದೆ.

ಜಿದ್ದಾ ವಿಮಾನ ನಿಲ್ದಾಣದಲ್ಲಿ ಸಿದ್ಧತೆಗಳ ಪರಿಶೀಲನೆ

ಸೌದಿ ಅರೇಬಿಯದ ಸಾರಿಗೆ ಸಚಿವ ನಬಿಲ್ ಬಿನ್ ಮುಹಮ್ಮದ್ ಅಲ್-ಅಮೂದಿ ಬುಧವಾರ ಜಿದ್ದಾದಲ್ಲಿರುವ ದೊರೆ ಅಬ್ದುಲಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಹಜ್ ಹಾಲ್‌ಗಳಿಗೆ ಭೇಟಿ ನೀಡಿದರು.

ಯಾತ್ರಿಕರನ್ನು ಸ್ವಾಗತಿಸುವ ಪ್ರಕ್ರಿಯೆ ಹಾಗೂ ಸಿಬ್ಬಂದಿಯ ದಕ್ಷತೆಯು ಮಹಾ ನಾಗರಿಕ ವಾಯುಯಾನ ಪ್ರಾಧಿಕಾರ (ಜಿಎಸಿಎ)ದ ನಿರ್ವಹಣಾ ಯೋಜನೆಗೆ ಅನುಗುಣವಾಗಿದೆಯೇ ಎನ್ನುವುದನ್ನು ಪರಿಶೀಲಿಸಲು ಅವರು ಭೇಟಿ ನೀಡಿದರು.

ಯಾತ್ರಿಕರ ಪ್ರಯಾಣ ವಿಧಿವಿಧಾನಗಳನ್ನು ಸರಳಗೊಳಿಸಬೇಕು ಹಾಗೂ ಅವರಿಗೆ ಗರಿಷ್ಠ ಸೇವೆಗಳನ್ನು ನೀಡಬೇಕು ಎನ್ನುವುದು ನಿರ್ವಹಣಾ ಯೋಜನೆಯಾಗಿದೆ.

ಹಜ್ ನಿಯೋಗಗಳನ್ನು ಸ್ವಾಗತಿಸಲು ನಡೆಸಲಾಗುತ್ತಿರುವ ಸಿದ್ಧತೆಗಳನ್ನೂ ಅವರು ಪರಿಶೀಲಿಸಿದರು.

ತಂತ್ರಜ್ಞಾನದ ಬಳಕೆ ಮತ್ತು ಇಲೆಕ್ಟ್ರಾನಿಕ್ ಪ್ರೋಗ್ರಾಮ್‌ಗಳು ಪ್ರಯಾಣ ವಿಧಿವಿಧಾನಗಳ ಸರಳೀಕರಣಕ್ಕೆ ಕಾರಣವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News