ಮಳೆಬಾಧಿತ ಸೂಡನ್‌ಗೆ ನೆರವಿನ ಹಸ್ತ ಚಾಚಿದ ಯುಎಇ

Update: 2018-08-19 17:38 GMT

ದುಬೈ, ಆ.19: ತೀವ್ರ ಮಳೆಯಿಂದ ಪ್ರವಾಹಕ್ಕೀಡಾಗಿ ಸಂಕಷ್ಟ ಸ್ಥಿತಿಯನ್ನು ಎದುರಿಸುತ್ತಿರುವ ಸೂಡನ್‌ನ ಸಂತ್ರಸ್ತರಿಗೆ ನೆರವಿನ ಹಸ್ತವನ್ನು ಚಾಚಿರುವ ಯುಎಇ ಅಧ್ಯಕ್ಷ ಶೇಕ್ ಖಲೀಫಾ ಬಿನ್ ಝಯೇದ್ ಅಲ್ ನಹ್ಯಾನ್ ನೆರೆಪೀಡಿತ ಪ್ರದೇಶದ ಜನರಿಗೆ ಹೆಲಿಕಾಪ್ಟರ್ ಮೂಲಕ ಆಹಾರ ಸಾಮಗ್ರಿಗಳನ್ನು ಪೂರೈಸಲು ಆದೇಶಿಸಿದ್ದಾರೆ.

ಸೂಡನ್‌ನ ರಾಜಧಾನಿ ಖಾರ್ಟೂಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುರಿದ ತೀವ್ರ ಮಳೆಯಿಂದಾಗಿ ನೂರಾರು ಜನರು ಸಾವನ್ನಪ್ಪಿದ್ದರೆ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ದೇಶದ ವಿದ್ಯುತ್ ಸಂಪರ್ಕ, ಮನೆಗಳು ಮತ್ತು ಸಾರ್ವಜನಿಕ ಸೌಕರ್ಯಗಳು ಸಂಪೂರ್ಣ ನಾಶವಾಗಿದ್ದು ಜನರು ಆಹಾರ, ನೀರಿಲ್ಲದೆ ಕಂಗಾಲಾಗಿದ್ದಾರೆ. ಯುಎಇಯ ರೆಡ್ ಕ್ರೆಸೆಂಟ್ ತಂಡ ಸೂಡನ್‌ನ ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದು ಸಂತ್ರಸ್ತರಿಗೆ ಅಗತ್ಯ ವಸ್ತುಗಳು ಮತ್ತು ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ. ದೇಶದ ರಾಷ್ಟ್ರೀಯ ಆದಾಯವನ್ನು ಪರಿಗಣಿಸಿದರೆ ಯುಎಇ 2017ರಲ್ಲಿ ಜಗತ್ತಿನಲ್ಲೇ ಮಾನವೀಯ ಕಾರ್ಯಗಳಿಗೆ ಅತೀಹೆಚ್ಚು ದೇಣಿಗೆ ನೀಡಿದ ರಾಷ್ಟ್ರವಾಗಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News