ಮಕ್ಕಾದಲ್ಲಿ ಪ್ರವಾಹ ಸಾಧ್ಯತೆ: ಸೌದಿ ಅರೇಬಿಯ ಎಚ್ಚರಿಕೆ

Update: 2018-08-20 16:38 GMT

 ರಿಯಾದ್, ಆ. 20: ಮಕ್ಕಾದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಬರುವ ಸಾಧ್ಯತೆಯಿದೆ ಎಂದು ಸೌದಿ ಅರೇಬಿಯದ ಹವಾಮಾನ ಪ್ರಾಧಿಕಾರ ರವಿವಾರ ಎಚ್ಚರಿಸಿದೆ ಎಂದು ‘ಅಲ್-ಅಖ್ಬರಿಯಾ’ ವರದಿ ಮಾಡಿದೆ.

ಮುಸ್ಲಿಮರ ಹಜ್ ಕಾರ್ಯಕ್ರಮಗಳು ನಡೆಯುವ ಮಕ್ಕಾ, ಮಿನಾ ಮತ್ತು ಅರಫಾತ್‌ಗಳಲ್ಲಿ ಅಸ್ಥಿರ ಹವಾಮಾನ ಮುಂದುವರಿಯಲಿದೆ ಎಂದು ಅದು ತಿಳಿಸಿದೆ.

‘ತರಾವಿಯಾ’ ಕಾರ್ಯಕ್ರಮಕ್ಕಾಗಿ ಸುಮಾರು 20 ಲಕ್ಷ ಯಾತ್ರಿಕರು ಮಿನಾದಲ್ಲಿ ಡೇರೆಗಳಲ್ಲಿ ವಾಸಿಸುತ್ತಿದ್ದಾಗ ಮಳೆ ಸುರಿದಿದೆ.

ರವಿವಾರ ಸಂಜೆ ಮಕ್ಕಾದಲ್ಲಿ ಬೀಸಿದ ಬಲವಾದ ಗಾಳಿಯ ಹಿನ್ನೆಲೆಯಲ್ಲಿ, ಇಸ್ಲಾಮ್‌ನ ಅತ್ಯಂತ ಪವಿತ್ರ ಸ್ಥಳ ಕಅಬದ ಸುತ್ತ ನೇತಾಡಿಸಲಾಗಿರುವ ಬಟ್ಟೆ ‘ಕಿಸ್ವ’ವನ್ನು ಸ್ಥಳಾಂತರಿಸಲಾಯಿತು.

ಬಲಿ ಪ್ರಾಣಿಗಳ ವೆಚ್ಚ ಭರಿಸಲಿರುವ ಸೌದಿ ದೊರೆ

‘ದೊರೆ ಸಲ್ಮಾನ್ ಹಜ್ ಮತ್ತು ಉಮ್ರಾ ಕಾರ್ಯಕ್ರಮ’ದ ಪ್ರಯೋಜನವನ್ನು ಪಡೆಯುತ್ತಿರುವ ಸಾವಿರಾರು ಮಂದಿಗೆ ಪ್ರಾಣಿಗಳನ್ನು ಬಲಿ ನೀಡಲು ತಗಲುವ ವೆಚ್ಚವನ್ನು ಸೌದಿ ಅರೇಬಿಯ ದೊರೆ ಸಲ್ಮಾನ್ ಭರಿಸಲಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಈ ಕಾರ್ಯಕ್ರಮದ ಪ್ರಯೋಜನವನ್ನು ಈ ಬಾರಿ 95 ದೇಶಗಳ 5,400 ಯಾತ್ರಿಕರು ಪಡೆದಿದ್ದಾರೆ.

‘‘ಫೆಲೆಸ್ತೀನಿ ಹುತಾತ್ಮರ ಕುಟುಂಬ ಸದಸ್ಯರು, ಈಜಿಪ್ಟ್ ಸೇನೆ ಮತ್ತು ಪೊಲೀಸ್ ಹುತಾತ್ಮರ ಕುಟುಂಬಿಕರು, ಸುಡಾನ್ ಸೇನೆಯ ಹುತಾತ್ಮರು ಮತ್ತು ಗಾಯಾಳುಗಳ ಸಂಬಂಧಿಕರು ಹಾಗೂ ಯಮನ್ ನ್ಯಾಶನಲ್ ಆರ್ಮಿಯ ಹುತಾತ್ಮ ಹಾಗೂ ಗಾಯಗೊಂಡ ಸೈನಿಕರ ಕಟುಂಬ ಸದಸ್ಯರು ಸೇರಿದಂತೆ ಈ ಕಾರ್ಯಕ್ರಮದ ಎಲ್ಲ ಅತಿಥಿಗಳಿಗೆ ಇದು ಅನ್ವಯಿಸುತ್ತದೆ’’ ಎಂದು ಸೌದಿ ಅರೇಬಿಯ ಇಸ್ಲಾಮಿಕ್ ವ್ಯವಹಾರಗಳ ಸಚಿವ ಶೇಖ್ ಅಬ್ದುಲ್ಲಾ ಬಿನ್ ಅಬ್ದುಲ್ ಅಝೀಝ್ ಅಲ್-ಶೇಖ್ ತಿಳಿಸಿದರು.

ಈ ಬಾರಿ 23 ಲಕ್ಷಕ್ಕೂ ಅಧಿಕ ಯಾತ್ರಿಗಳು

ಈ ಬಾರಿ ಹಜ್ ಯಾತ್ರೆಗಾಗಿ 23 ಲಕ್ಷಕ್ಕೂ ಅಧಿಕ ಯಾತ್ರಿಗಳು ಮಕ್ಕಾಗೆ ಆಗಮಿಸಿದ್ದಾರೆ ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿ ಸಂಸ್ಥೆ ‘ಸೌದಿ ಪ್ರೆಸ್ ಏಜನ್ಸಿ’ ವರದಿ ಮಾಡಿದೆ.

ಸೋಮವಾರದವರೆಗೆ ಸೌದಿ ಅರೇಬಿಯದ ವಿಮಾನ ನಿಲ್ದಾಣ, ಬಂದರು ಮತ್ತು ಭೂ ಮಾರ್ಗಗಳ ಮೂಲಕ 23,68,873 ಮಂದಿ ಆಗಮಿಸಿದ್ದಾರೆ ಎಂದು ಅಂಕಿಸಂಖ್ಯೆಗಳ ಮಹಾ ನಿರ್ದೇಶನಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News