ಐವರು ಮಾನವ ಹಕ್ಕು ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಲು ಸೌದಿ ಮುಂದು

Update: 2018-08-23 15:16 GMT

ರಿಯಾದ್, ಆ. 23: ಸೌದಿ ಅರೇಬಿಯದ ಈಸ್ಟರ್ನ್ ಪ್ರಾವಿನ್ಸ್‌ನ ಐವರು ಮಾನವಹಕ್ಕುಗಳ ಕಾರ್ಯಕರ್ತರಿಗೆ ಮರಣ ದಂಡನೆ ವಿಧಿಸಬೇಕೆಂದು ದೇಶದ ಸರಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎಂದು ಹ್ಯೂಮನ್ಸ್ ರೈಟ್ಸ್ ವಾಚ್ ಮುಂತಾದ ಸಂಘಟನೆಗಳು ಹೇಳಿವೆ.

ಅವರ ವಿರುದ್ಧ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ರಹಸ್ಯ ವಿಚಾರಣೆ ನಡೆಯುತ್ತಿದೆ.

 ಮರಣ ದಂಡನೆ ಎದುರಿಸುತ್ತಿರುವವರಲ್ಲಿ ಇಸ್ರಾ ಅಲ್-ಗೊಮ್‌ಗಮ್ ಎಂಬ ಶಿಯಾ ಮಹಿಳೆಯೂ ಸೇರಿದ್ದಾರೆ. ಮಾನವಹಕ್ಕು ಸಂಬಂಧಿ ಹೋರಾಟದಲ್ಲಿ ಮರಣ ದಂಡನೆ ಎದುರಿಸುತ್ತಿರುವ ಪ್ರಥಮ ಮಹಿಳೆ ಅವರಾಗಿದ್ದಾರೆ ಎಂದು ಸೌದಿ ಮಾನವಹಕ್ಕು ಕಾರ್ಯಕರ್ತರು ಹೇಳಿದ್ದಾರೆ.

ಪ್ರತಿಭಟನೆಗೆ ಪ್ರಚೋದನೆ ನೀಡಿದ ಹಾಗೂ ಗಲಭೆಕೋರರಿಗೆ ನೈತಿಕ ಬೆಂಬಲ ನೀಡಿದ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ.

‘‘ಯಾವುದೇ ಅಪರಾಧಕ್ಕಾಗಿ ಮರಣ ದಂಡನೆ ವಿಧಿಸುವುದು ಆಘಾತಕಾರಿಯಾಗಿದೆ. ಆದರೆ, ಯಾವುದೇ ಹಿಂಸಾತ್ಮಕ ವರ್ತನೆಯನ್ನು ತೋರಿದ ಆರೋಪಗಳೂ ಇಲ್ಲದ ಇಸ್ರಾ ಅಲ್-ಗೊಮ್‌ಗಮ್‌ರಂಥ ಮಾನವಹಕ್ಕುಗಳ ಕಾರ್ಯಕರ್ತರಿಗೆ ಮರಣ ದಂಡನೆ ಕೋರುವುದು ರಾಕ್ಷಸೀಯ ಪ್ರವೃತ್ತಿಯಾಗಿದೆ’’ ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಮಧ್ಯ ಪ್ರಾಚ್ಯ ನಿರ್ದೇಶಕಿ ಸಾರಾ ಲೀಹ್ ವೈಟ್ಸನ್ ಹೇಳಿದ್ದಾರೆ.

ಇಸ್ರಾರಿಗೆ ಮರಣ ದಂಡನೆ ವಿಧಿಸಲು ಸೌದಿ ಅರೇಬಿಯ ಮುಂದಾಗಿರುವ ವಿಷಯವನ್ನು ಲಂಡನ್‌ನಲ್ಲಿರುವ ಸೌದಿ ಅರೇಬಿಯದ ಮಾನವಹಕ್ಕುಗಳ ಗುಂಪು ಎಎಲ್‌ಕ್ಯೂಎಸ್‌ಟಿ ಕಳೆದ ವಾರ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News