ವಿಶ್ವ ತುಳು ಸಮ್ಮೇಳನ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭರ್ಜರಿ ತಯಾರಿ

Update: 2018-09-01 07:28 GMT

ದುಬೈ, ಆ.31: ಸಾಗರೋತ್ತರ ತುಳುವರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಹಾಗೂ ತುಳು ಒಕ್ಕೂಟದ ಸಹಯೋಗದಲ್ಲಿ ನವೆಂಬರ್ 23 ಮತ್ತು 24ರಂದು ದುಬೈಯ ಅಲ್ ನಾಸರ್ ಲೀಸರ್‌ಲ್ಯಾಂಡ್ ಐಸ್ ರಿಂಕ್ ಮತ್ತು ನಶ್ವನ್ ಹಾಲ್‌ನಲ್ಲಿ ಎರಡು ದಿನಗಳ ವೈಭವದ ‘ವಿಶ್ವ ತುಳು ಸಮ್ಮೇಳನ-2018’ ನಡೆಯಲಿದ್ದು,  ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭರ್ಜರಿ ತಯಾರಿ ನಡೆಯುತ್ತಿದೆ.

ಸಮ್ಮೇಳನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮವಿಭೂಷಣ ಡಾ. ಡಿ.ವೀರೇಂದ್ರ ಹೆಗಡೆ ಮುಖ್ಯ ಅಥಿತಿಯಾಗಿ ಭಾಗವಹಿಸುವರು. ಎನ್‌ಎಂಸಿ ಸಮೂಹ ಸಂಸ್ಥೆಯ ಅಧ್ಯಕ್ಷ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ, ಮಂಗಳೂರು ಬಿಷಪ್ ಫಾ. ಪೀಟರ್ ಪೌಲ್ ಸಲ್ದಾನ, ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಸಿಎಸ್‌ಐ ಮಂಗಳೂರಿನ ಫಾ.ಎಬ್ನಝೆರ್ ಜಥಾನ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸೇರಿದಂತೆ ತುಳುನಾಡಿನ ಇತರ ಗಣ್ಯರ ಜೊತೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಸಮಾರಂಭದ ಸಿದ್ಧತೆಯ ಬಗ್ಗೆ ಚರ್ಚಿಸಲು ಇತ್ತೀಚೆಗೆ ಕರೆಯಲಾಗಿದ್ದ ಸಭೆಯಲ್ಲಿ ಸಮ್ಮೇಳನ ಯಶಸ್ವಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.
ಸರ್ವೋತ್ತಮ ಶೆಟ್ಟಿ ಸಮ್ಮೇಳನದ ಮುಖ್ಯ ಸಂಯೋಜಕರಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ವ್ಯವಸ್ಥಾಪಕ ಶೋಧನ್ ಪ್ರಸಾದ್, ಗಣೇಶ್ ರೈ, ದೇವ ಕುಮಾರ್ ಕಾಂಬ್ಳಿ, ಸತೀಶ್ ಪೂಜಾರಿ, ಯೋಗೀಶ್ ಪ್ರಭು, ಅಜ್ಮಲ್ ಸೈಯದ್, ಎಂ.ಇ. ಮೂಳೂರು, ಆಲ್ವಿನ್ ಪಿಂಟೊ, ಅಫ್ರೋಝ್ ಅಸ್ಸಾದಿ, ನೋಯೆಲ್ ಅಲ್ಮೇಡ, ಜ್ಯೇತಿಕಾ ಶೆಟ್ಟಿ, ಸ್ಮಿತಾ ಭಟ್, ಸುವರ್ಣ ಸತೀಶ್ ಮತ್ತು ಶಶಿ ಶೆಟ್ಟಿ ಅವರಿಗೆ ಬೆಂಬಲವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಕರಾವಳಿಗರ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಈ ಅಭೂತಪೂರ್ವ ಸಮಾರಂಭದಲ್ಲಿ 4000ಕ್ಕೂ ಅಧಿ ಜನರು ಭಾಗಿಯಾಗುವ ನಿರೀಕ್ಷೆಯಿದೆ.

ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮತ್ತು ಸಮ್ಮೇಳನ ಸಮಿತಿ ಮುಖ್ಯಸ್ಥ ಪ್ರಕಾಶ್ ರಾವ್ ಪಯ್ಯಿರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋರ್ ಸಮಿತಿ ತಂಡದ ಅಜ್ಮಲ್ ಎಸ್.ಎಂ., ವೈಷ್ಣವಿ ಶೆಟ್ಟಿ, ರವಿರಾಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಜಯಂತ್ ಶೆಟ್ಟಿ, ಅಶೋಕ್ ಅಂಚನ್, ಗಿರೀಶ್ ನರೈನ್, ಕೃಷ್ಣ ಪ್ರಸಾದ್, ನಿತ್ಯಾನಂದ ಬೆಸ್ಕೂರು, ವಾಸು ಬಾಯಾರ್, ದಿನೇಶ್ ಶೆಟ್ಟಿ ಕೊಟ್ಟಿಂಜ, ಕಿರಣ್ ಶೆಟ್ಟಿ, ದೆವೇಶ್ ಆಳ್ವಾ, ಜಸ್ಮಿತಾ ವಿವೇಕ್ ಹಾಗೂ ಉಷಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದ ಭಾಗವಾಗಿ, ತಂಡಗಳ ಜಾನಪದ ನೃತ್ಯ ಸ್ಪರ್ಧೆ, ತುಳುನಾಡಿನ ನೃತ್ಯ ರೂಪಕ, ಯಕ್ಷ ನಾಟ್ಯಗಾನ ವೈಭವ, ತಾಳ ಮದ್ದಲೆ, ಹುಲಿ ಕುಣಿತ, ದೈವಾರಾಧನೆ ಮತ್ತು ಭೂತಾರಾಧನೆ ಗೋಷ್ಠಿ, ಹಾಸ್ಯ, ಚುಟುಕು, ಕವನಗೋಷ್ಠಿ, ತುಳು ರಂಗಭೂಮಿ, ತುಳು ಚಲನಚಿತ್ರ ಗೋಷ್ಠಿಗಳು, ಅನಿವಾಸಿ, ಹೊರನಾಡ ತುಳುವರ ಗೋಷ್ಠಿಗಳು, ತುಳು ರಸಮಂಜರಿ ಹಾಗೂ ಇರ ಕಾರ್ಯಕ್ರಮಗಳು ನಡೆಯಲಿವೆ.

ನವೀನ್ ಶೆಟ್ಟಿ ಎಡ್ಮಾರ್, ಸಾಯಿಹೀಲ್ ರೈ, ಕದ್ರಿ ನವನೀತ್ ಶೆಟ್ಟಿ, ಭಾಸ್ಕರ್ ರೈ ಕುಕ್ಕುವಳ್ಳಿ, ದಯಾನಂದ ಕತ್ತಲ್ಸಾರ್ ಹಾಗೂ ಇತರರು ತಮ್ಮ ನಿರೂಪಣೆಯ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ.

ಸಮಾರಂಭದ ವೇಳೆ ತುಳುನಾಡಿನ ಸಾಂಪ್ರದಾಯಿಕ ಮತ್ತು ಸ್ವಾದಿಷ್ಟ ತಿನಿಸುಗಳನ್ನು ಪ್ರೇಕ್ಷಕರಿಗೆ ಒದಗಿಸಲಾಗುವುದು. ಜೊತೆಗೆ ತುಳುನಾಡಿನ ಪರಂಪರೆಯನ್ನು ಸಾರುವ ವಿಶೇಷ ಐತಿಹಾಸಿಕ ವಸ್ತುಗಳ ಪ್ರದರ್ಶನವೂ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Writer - ಶೋಧನ್ ಪ್ರಸಾದ್

contributor

Editor - ಶೋಧನ್ ಪ್ರಸಾದ್

contributor

Similar News