ಕತರನ್ನು ದ್ವೀಪವಾಗಿ ಮಾಡುವ ಯೋಜನೆ ಜಾರಿಗೆ ಸೌದಿ ಇಂಗಿತ

Update: 2018-09-01 16:13 GMT

ರಿಯಾದ್, ಸೆ. 1: ಕತರ್ ಜೊತೆಗಿನ ಗಡಿಯುದ್ದಕ್ಕೂ ಕಾಲುವೆಯೊಂದನ್ನು ತೋಡುವ ತನ್ನ ಯೋಜನೆಯನ್ನು ಜಾರಿಗೊಳಿಸಲು ಸೌದಿ ಅರೇಬಿಯ ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಯೋಜನೆ ಜಾರಿಗೆ ಬಂದರೆ ಈಗಾಗಲೇ ಪರ್ಯಾಯ ದ್ವೀಪವಾಗಿರುವ ಕತರ್ ಸಂಪೂರ್ಣ ದ್ವೀಪವಾಗುತ್ತದೆ.

ಕತರ್ ಮತ್ತು ಇತರ ಕೊಲ್ಲಿ ಅರಬ್ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಈ ನೂತನ ಬೆಳವಣಿಗೆ ಸಂಭವಿಸಿದೆ.

ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಕಳೆದ ವರ್ಷದ ಜೂನ್‌ನಲ್ಲಿ ಕತರ್ ಜೊತೆಗಿನ ರಾಜತಾಂತ್ರಿಕ, ವ್ಯಾಪಾರ ಸಂಬಂಧ ಸೇರಿದಂತೆ ಎಲ್ಲ ರೀತಿಯ ಸಂಬಂಧಗಳನ್ನು ದಿಢೀರ್ ಆಗಿ ಕಳೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎನ್ನುವುದು ಈ ದೇಶಗಳ ಆರೋಪವಾಗಿದೆ.

‘‘ ‘ಸಾಲ್ವ’ ದ್ವೀಪ ಯೋಜನೆಯ ಜಾರಿಗೆ ಸಂಬಂಧಿಸಿದ ವಿವರಗಳನ್ನು ನಾನು ಕಾತರದಿಂದ ಕಾಯುತ್ತಿದ್ದೇನೆ. ಇದು ಶ್ರೇಷ್ಠ ಐತಿಹಾಸಿಕ ಯೋಜನೆಯಾಗಿದ್ದು, ಈ ವಲಯದ ಭೌಗೋಳಿಕ ನಕ್ಷೆಯನ್ನೇ ಬದಲಾಯಿಸಲಿದೆ’’ ಎಂದು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಹಿರಿಯ ಸಲಹಾಗಾರ ಸೌದ್ ಅಲ್-ಕಹ್ತಾನಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.

 ಕತರ್ ಪರ್ಯಾಯ ದ್ವೀಪವನ್ನು ಸೌದಿ ಪ್ರಧಾನ ನೆಲದಿಂದ ಭೌತಿಕವಾಗಿ ಪ್ರತ್ಯೇಕಿಸುವ ಯೋಜನೆಯು ಉಭಯ ದೇಶಗಳ ನಡುವೆ ಹೊಸ ಉದ್ವಿಗ್ನತೆಗೆ ಕಾರಣವಾಗುವ ಎಲ್ಲ ಅಂಶಗಳನ್ನು ಹೊಂದಿದೆ.

60 ಕಿ.ಮೀ. ಉದ್ದದ ಕಾಲುವೆ

ಸೌದಿ ಅರೇಬಿಯ ಮತ್ತು ಕತರ್ ನಡುವಿನ ಗಡಿಯುದ್ದಕ್ಕೂ ಸಾಗುವ ಕಾಲುವೆಯು 60 ಕಿ.ಮೀ. ಉದ್ದ ಮತ್ತು 200 ಮೀಟರ್ ಅಗಲ ಇರುತ್ತದೆ ಎಂಬುದಾಗಿ ಸರಕಾರದ ಪರವಾಗಿರುವ ವೆಬ್‌ಸೈಟ್ ‘ಸಬ್ಕ್ ನ್ಯೂಸ್’ ಎಪ್ರಿಲ್‌ನಲ್ಲಿ ವರದಿ ಮಾಡಿತ್ತು.

ಒಟ್ಟು 2.8 ಬಿಲಿಯ ರಿಯಾಲ್ (ಸುಮಾರು 5,300 ಕೋಟಿ ರೂಪಾಯಿ) ವೆಚ್ಚದಲ್ಲಿ ನಿರ್ಮಿಸಲಾಗುವ ಕಾಲುವೆಯ ಒಂದು ಭಾಗವನ್ನು ಪರಮಾಣು ತ್ಯಾಜ್ಯ ಸಂಗ್ರಹಕ್ಕಾಗಿ ಮೀಸಲಿಡಲಾಗುವುದು ಎಂದು ವೆಬ್‌ಸೈಟ್ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News