ಯಮನ್ ದಾಳಿಯಲ್ಲಿ ತಪ್ಪಾಗಿದೆ: ಒಪ್ಪಿಕೊಂಡ ಸೌದಿ ಅರೇಬಿಯ

Update: 2018-09-02 17:12 GMT

ರಿಯಾದ್, ಸೆ. 2: ಯಮನ್‌ನಲ್ಲಿ ಆಗಸ್ಟ್‌ನಲ್ಲಿ ನಡೆಸಲಾದ ವಾಯು ದಾಳಿಯಲ್ಲಿ ‘ತಪ್ಪು’ಗಳಾಗಿರುವುದನ್ನು ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ಶನಿವಾರ ಒಪ್ಪಿಕೊಂಡಿದೆ.

ಆ ದಾಳಿಯಲ್ಲಿ 40 ಮಕ್ಕಳು ಸೇರಿದಂತೆ 51 ಮಂದಿ ಮೃತಪಟ್ಟಿದ್ದಾರೆ. ಹೌದಿ ಬಂಡುಕೋರರ ನಿಯಂತ್ರಣದಲ್ಲಿರುವ ಉತ್ತರ ಯಮನ್‌ನ ಜನನಿಬಿಡ ಮಾರುಕಟ್ಟೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಒಟ್ಟು 51 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರೆಡ್ ಕ್ರಾಸ್ ಹೇಳಿದೆ.

ಸಾದ ರಾಜ್ಯದಲ್ಲಿರುವ ಮಾರುಕಟ್ಟೆಯ ಮೇಲೆ ಆಗಸ್ಟ್ 9ರಂದು ನಡೆದ ದಾಳಿಯಲ್ಲಿ 79 ಮಂದಿ ಗಾಯಗೊಂಡಿದ್ದು, ಆ ಪೈಕಿ 56 ಮಂದಿ ಮಕ್ಕಳಾಗಿದ್ದಾರೆ. ಈ ದಾಳಿಯು ಅಂತಾರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾಗಿತ್ತು ಹಾಗೂ ಆ ಬಗ್ಗೆ ವಿಶ್ವಾಸಾರ್ಹ ಮತ್ತು ಪಾರದರ್ಶಕ ತನಿಖೆ ನಡೆಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕರೆ ನೀಡಿತ್ತು.

ದಾಳಿಗೂ ಮೊದಲು ತಪ್ಪುಗಳು ಸಂಭವಿಸಿದ್ದವು ಎನ್ನುವುದು ಮಿತ್ರಪಡೆ ನಡೆಸಿದ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮಿತ್ರಕೂಟದ ವಕ್ತಾರ ಮನ್ಸೂರ್ ಅಲ್-ಮನ್ಸೂರ್ ರಿಯಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘‘ನಾಗರಿಕರ ನಡುವೆ ಇರುವ ಬಸ್ಸಿನ ಮೇಲೆ ಬಾಂಬ್ ಹಾಕದಂತೆ ಆದೇಶ ನೀಡಲಾಗಿತ್ತು. ಆದರೆ, ಆ ಆದೇಶ ತಡವಾಗಿ ಬಂತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News