ಗಲ್ಫ್ ವೈದ್ಯಕೀಯ ವಿವಿಯಿಂದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

Update: 2018-09-06 05:22 GMT

ದುಬೈ, ಸೆ.5: ಗಲ್ಫ್ ಪ್ರದೇಶದ ಅತೀದೊಡ್ಡ ಖಾಸಗಿ ವೈದ್ಯಕೀಯ ವಿವಿಯಾಗಿರುವ ಗಲ್ಫ್ ವೈದ್ಯಕೀಯ ವಿವಿಯಲ್ಲಿ ಸೆ.5ರಂದು ನಡೆದ ‘ವೈಟ್ ಕೋಟ್’ ಸಮಾರಂಭದಲ್ಲಿ 400ಕ್ಕೂ ಅಧಿಕ ಹೊಸ ವಿದ್ಯಾರ್ಥಿಗಳು ಆರೋಗ್ಯ ವೃತ್ತಿಯ ಗುರುತಾಗಿರುವ ಬಿಳಿಯ ಕೋಟ್‌ಗಳನ್ನು ಧರಿಸಿ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೂಲಕ ವಿವಿಧ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಂಡರು.

ಔಷಧ, ಬಯೋಮೆಡಿಕಲ್ ಸಯನ್ಸ್, ಪ್ರಿ-ಕ್ಲಿನಿಕಲ್ ಸಯನ್ಸ್‌ನಲ್ಲಿ ಅಸೋಸಿಯೇಟ್ ಪದವಿ, ಫಿಸಿಯೊಥೆರಪಿ, ದಂತವೈದ್ಯಕೀಯ, ಫಾರ್ಮಸಿ, ಮೆಡಿಕಲ್ ಲ್ಯಾಬೊರೆಟರಿ ಸಯನ್ಸ್, ಮೆಡಿಕಲ್ ಇಮೇಜಿಂಗ್ ಸಯನ್ಸ್ ಹಾಗೂ ಅನಸ್ತೇಶಿಯ ತಂತ್ರಜ್ಞಾನ ಮುಂತಾದ ವಿಭಾಗಗಳ ವಿದ್ಯಾರ್ಥಿಗಳನ್ನು ಈ ವೇಳೆ ಸ್ವಾಗತಿಸಲಾಯಿತು.

ಗಲ್ಫ್ ವೈದ್ಯಕೀಯ ವಿವಿಯ ಸ್ಥಾಪಕ, ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಡಾ.ತುಂಬೆ ಮುಹಿಯುದ್ದೀನ್ ವೈಟ್ ಕೋಟ್ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಜಿಎಂಯು ಕುಲಪತಿ ಪ್ರೊ.ಹೊಸ್ಸಮ್ ಹಮ್ದಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಜಿಎಂಯುಗೆ ನಿರಂತರ ಬೆಂಬಲ ನೀಡುವ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಲು ನೆರವಾದ ಅಜ್ಮನ್ ದೊರೆ ಮತ್ತು ಯುಎಇ ಸುಪ್ರೀಂ ಕೌನ್ಸಿಲ್‌ನ ಸದಸ್ಯ ಶೇಕ್ ಹುಮೈದ್ ಬಿನ್ ರಶೀದ್ ಅಲ್ ನುಅಮಿ ಅವರಿಗೆ ಈ ಸಂದರ್ಭ ಡಾ. ತುಂಬೆ ಮುಹಿಯುದ್ದೀನ್ ಧನ್ಯವಾದ ಸಮರ್ಪಿಸಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ. ಹಮ್ದಿ, ವೈದ್ಯಕೀಯ ವಿಜ್ಞಾನವು ಎಂದಿಗೂ ಮಾನವರ ಮಧ್ಯೆ ಸಂಭಾಷಣೆಯ ಮೇಲೆ ಅವಲಂಬಿತವಾಗಿರುತ್ತದೆ. ರೋಗಿಗಳು, ವಿದ್ಯಾರ್ಥಿಗಳು, ಆರೋಗ್ಯಸೇವೆ ಪೂರೈಕೆದಾರರು ಮತ್ತು ವೈದ್ಯಕೀಯ ಶಿಕ್ಷಕರು ಎಲ್ಲರೂ ಮಾನವರೇ. ಯಾವ ರೀತಿ ಸಂಭಾಷಿಸಬೇಕು, ಸಂಪರ್ಕಿಸಬೇಕು ಮತ್ತು ಸ್ಪಂದಿಸಬೇಕು ಹಾಗೂ ಅನುಭೂತಿ ಹೊಂದಬೇಕು ಎಂಬುದು ಆರೋಗ್ಯ ವೃತ್ತಿಪರರಿಗೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನೀವು ಉತ್ತಮ ಸಂಭಾಷಣಾಕಾರರಾಗುವುದು ಹೇಗೆ ಎಂಬುದನ್ನು ನಾವು ನಿಮಗೆ ಕಲಿಸಿಕೊಡುತ್ತೇವೆ ಎಂದು ತಿಳಿಸಿದರು.

ವೃತ್ತಿಪರತೆ, ಜಾಗರೂಕತೆ ಮತ್ತು ಅನುಭೂತಿ ಹಾಗೂ ವಿಶ್ವಾಸಾರ್ಹತೆ ಈ ಮೂರು ಅಂಶಗಳು ವೈದ್ಯಕೀಯ ರಂಗದ ಮೂರು ಪ್ರಮುಖ ತತ್ವಗಳು ಎಂದು ಹೇಳಿದರು.

ಈ ವರ್ಷ ಜಿಎಂಯು, ನರ್ಸಿಂಗ್ ಕಾಲೇಜು ಮತ್ತು ಆರೋಗ್ಯ ಸೇವೆ ವ್ಯವಸ್ಥಾಪನಾ ಕಾಲೇಜು ಎಂಬ ಎರಡು ನೂತನ ಕಾಲೇಜುಗಳನ್ನು ಆರಂಭಿಸಿದೆ. ಆ ಮೂಲಕ ಕಾಲೇಜುಗಳ ಸಂಖ್ಯೆ ಆರಕ್ಕೇರಿದೆ ಎಂದು ಅಧ್ಯಕ್ಷರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News