ಚೀನಾ ಓಪನ್: ಪಿ.ವಿ.ಸಿಂಧು ಶ್ರೀಕಾಂತ್ ಕ್ವಾರ್ಟರ್ ಫೆನಲ್‌ಗೆ

Update: 2018-09-20 18:28 GMT

  ಚಾಂಗ್‌ರೊವ್, ಸೆ.20: ಸ್ಟಾರ್ ಶಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಪ್ರಯಾಸದ ಜಯ ದಾಖಲಿಸುವ ಮೂಲಕ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಗುರುವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸಿಂಧು ಅವರು ಮಹಿಳೆಯರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್ ಒಂಗ್ಬಾಂಬುಂಗ್ಫಾನ್ ವಿರುದ್ಧ 21-23, 21-13, 21-18 ಅಂತರದಲ್ಲಿ ಜಯ ದಾಖಲಿಸಿದರು.

 ಸಿಂಧು ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ಬಳಿಕ ಚೇತರಿಸಿಕೊಂಡು ಎದುರಾಳಿಗೆ ತಿರುಗೇಟು ನೀಡಿದರು. ಸತತ ಎರಡು ಗೇಮ್‌ಗಳಲ್ಲಿ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿದರು.

ಪುರುಷರ ಸಿಂಗಲ್ಸ್ ನಲ್ಲಿ ಶ್ರೀಕಾಂತ್ ಅವರು ಸುಪ್ಪಾನ್ಯುಅವಿಂಗ್ಸಿಂಗ್ಯಾನ್ ವಿರುದ್ಧ 21-12, 15-21, 24-22 ಅಂತರದಲ್ಲಿ ಜಯ ದಾಖಲಿಸಿ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು.

     ಶ್ರೀಕಾಂತ್ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿದರೂ, ಎರಡನೇ ಗೇಮ್‌ನಲ್ಲಿ ಎದುರಾಳಿ ಸುಪ್ಪಾನ್ಯು ಸಮಬಲ ಸಾಧಿಸಿದರು. ಬಳಿಕ ತಿರುಗೇಟು ನೀಡಿದ ಶ್ರೀಕಾಂತ್ ಮೂರನೇ ಗೇಮ್‌ನಲ್ಲಿ 24-22 ಅಂತರದಲ್ಲಿ ಮೇಲುಗೈ ಸಾಧಿಸಿ ಜಯ ಗಳಿಸಿದರು.

ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ.

ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ಚೀನಾದ ಅಗ್ರಶ್ರೇಯಾಂಕದ ಸಿವೇಯ್ ಝೆಂಗ್ ಮತ್ತು ಹುಯಾಂಗ್ ಯಾಕಿಯೊಂಗ್ ವಿರುದ್ಧ 16-21, 10-21 ಅಂತರದಲ್ಲಿ ಸೋಲು ಅನುಭವಿಸಿದರು. ಸಿಕ್ಕಿ ರೆಡ್ಡಿ ಮತ್ತು ಪ್ರಣವ್ ಜೆರ್ರಿ ಚೋಪ್ರಾ ಅವರು ಡೆನ್ಮಾರ್ಕ್‌ನ 6ನೇ ಶ್ರೇಯಾಂಕದ ಕ್ರಿಸ್ಟಿಯನಾ ಪೆಡೆರ್ಸೆನ್ ಮತ್ತು ಮಥಾಯಿಸ್ ಕ್ರಿಸ್ಟಿಯನ್‌ಸೆನ್ ಎದುರು 16-21, 10-21 ಅಂತರದಲ್ಲಿ ಸೋತು ಅಭಿಯಾನ ಕೊನೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News