ಬಹರೈನ್: ಪ್ರಪ್ರಥಮ ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಸಜ್ಜು

Update: 2018-09-26 14:46 GMT

ಬಹರೈನ್, ಸೆ. 26:  ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಆಯೋಜಿಸಿರುವ ಪರಿಷತ್ತಿನ 104 ವರ್ಷಗಳ ಇತಿಹಾಸದಲ್ಲಿಯೇ ಪ್ರಥಮವೆನಿಸಿ ಕೊಳ್ಳಲಿರುವ ಪ್ರಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವು ಬಹರೈನ್ ನಲ್ಲಿ  ಅ. 5 ಹಾಗು 6 ರಂದು  ಜರುಗಲಿದೆ.

ಮನಾಮದಲ್ಲಿರುವ ಇಂಡಿಯನ್ ಕ್ಲಬ್ ನ 'ಸಂಸ್ಕಾರ್ ' ಸಭಾಂಗಣದಲ್ಲಿ ನಡೆಯುವ ಸಮ್ಮೇಳನಕ್ಕೆ ಕ್ಷಣ ಗಣನೆ ಪ್ರಾರಂಭವಾಗಲಿದೆ.

ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಹಾಗು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಜಂಟಿ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಸಮ್ಮೇಳನಕ್ಕೆ ನಾಡಿನಿಂದ 100ಕ್ಕೂ ಹೆಚ್ಚು ಸಾಹಿತಿಗಳು, ಕವಿಗಳು, ಲೇಖಕರು, ಬರಹಗಾರರು, ಚಿಂತಕರು ಆಗಮಿಸಲಿದ್ದಾರೆ . ಈ ಎರಡು ದಿನಗಳ ಸಮ್ಮೇಳನದಲ್ಲಿ ಕವಿ ಗೋಷ್ಠಿ, ವಿಚಾರ ಗೋಷ್ಠಿ, ವಿವಿಧ ಸಂವಾದಗಳು, ಕಮ್ಮಟಗಳ ಜೊತೆಗೆ ಎರಡೂ ದಿನಗಳು ನಾಡಿನ ಹಾಗು ಬಹರೈನ್ ನ  ಕಲಾವಿದರುಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದೆ .

ಅ.5ರಂದು ಅಪರಾಹ್ನ 2ಕ್ಕೆ ಸಮ್ಮೇಳನಕ್ಕೆ  ಚಾಲನೆ ದೊರಕಲಿದ್ದು, ಕನ್ನಡ ಮತ್ತು ಸಂಸ್ಕ್ರತಿ ಸಚಿವೆ,  ಡಾ. ಜಯಮಾಲಾ ಸಮ್ಮೇಳನವನ್ನು ಉದ್ಘಾಟಿಸಲಿದ್ದರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳೆಗಾರ್  ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕವಿ ಡಾ. ಎಚ್.ಎಸ್.ವೆಂಕಟೇಶ ಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ,ಹಂಪಿ ವಿ ವಿ ಕುಲಪತಿ ಡಾ ಮಲ್ಲಿಕಾ ಘಂಟಿ ಯವರ ಜೊತೆಗೆ ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಉಪಸ್ಥಿತಿ ಇರಲಿದ್ದಾರೆ.

ಈ ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ರೀತಿಯ ಗೋಷ್ಠಿಯ ಜೊತೆಗೆ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಗಲ್ಫ್ ಕನ್ನಡಿಗರ ಸ್ಥಿತಿಗತಿ ಕುರಿತಾದ ವಿಚಾರ ಗೋಷ್ಠಿಯು ಪ್ರೊ ಮಲ್ಲೇಪುರಂ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜರುಗಲಿದೆ. ಅ. 6ರಂದು ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪದ್ಮಶ್ರೀ ದೊಡ್ಡರಂಗೇಗೌಡ ವಹಿಸಿಕೊಳ್ಳಲಿದ್ದಾರೆ . ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಈ ಗೋಷ್ಠಿಯು ಸಾಹಿತಿ ಡಾ ಸಿದ್ದಲಿಂಗಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಹಿರಿಯ ಸಾಹಿತಿಗಳೊಂದಿಗಿನ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್  ವಹಿಸಲಿದ್ದಾರೆ.  ಸಮಾರೋಪ ಸಮಾರಂಭದಲ್ಲಿ  ಸಚಿವ ಯು .ಟಿ .ಖಾದರ್  ಮತ್ತು ರಾಜ್ಯ ಸಭಾ ಸದಸ್ಯ ಎಲ್ ಹನುಮಂತಯ್ಯ ಪಾಲ್ಗೊಳ್ಳಲಿದ್ದಾರೆ . ಈ ಎರಡೂ ದಿನಗಳ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಮನು ಬಳಿಗಾರ್ ರವರು ಅಲಂಕರಿಸಲಿದ್ದಾರೆ ಎಂದು ಕನ್ನಡ ಸಂಘದ ಅಧ್ಯಕ್ಷ  ಪ್ರದೀಪ್ ಶೆಟ್ಟಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರದೀಪ್ ಶೆಟ್ಟಿ ಅವರ ದೂರವಾಣಿ ಸಂಖ್ಯೆ 39147114 ಸಂಪರ್ಕಿಸಬಹುದು.

Writer - ಕಮಲಾಕ್ಷ ಅಮೀನ್

contributor

Editor - ಕಮಲಾಕ್ಷ ಅಮೀನ್

contributor

Similar News