ಕೊಡಗು, ಕೇರಳದ ನೆರೆಪೀಡಿತ ಉದ್ಯೋಗಿಗಳ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ ತುಂಬೆ ಸಿಎಸ್‌ಆರ್ ಸಮಿತಿ

Update: 2018-09-29 17:55 GMT

ದುಬೈ, ಸೆ.29: ಕೊಡಗು ಮತ್ತು ಕೇರಳದಲ್ಲಿ ನೆರೆ ಹಾವಳಿಯಿಂದ ಪೀಡಿತವಾಗಿರುವ ಕುಟುಂಬಗಳ ಉದ್ಯೋಗಿಗಳಿಗೆ ದುಬೈ ಮೂಲದ ತುಂಬೆ ಗ್ರೂಪ್‌ನ ಕೊರ್ಪೊರೇಟ್ ಸಾಮಾಜಿಕ ಹೊಣೆ (ಸಿಎಸ್‌ಆರ್) ಸಮಿತಿ ಆರ್ಥಿಕ ನೆರವು ನೀಡಿದೆ.

ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ತುಂಬೆ ಸಮೂಹದ ಸಿಎಸ್‌ಆರ್‌ನ ಮುಖ್ಯಸ್ಥರಾದ ಅಕ್ರಂ ಮೊಹಿಯುದ್ದೀನ್ ತುಂಬೆ ಉದ್ಯೋಗಿಗಳಿಗೆ ಆರ್ಥಿಕ ನೆರವನ್ನು ಹಸ್ತಾಂತರಿಸಿದರು. ಆಗಸ್ಟ್‌ನಲ್ಲಿ ಕೇರಳ ಹಾಗೂ ಕರ್ನಾಟಕದ ಕೊಡಗುವಿನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ನೆರೆಯು ತೀವ್ರ ಆಸ್ತಿಪಾಸ್ತಿ ಮತ್ತು ಜೀವಹಾನಿಯನ್ನುಂಟು ಮಾಡಿತ್ತು. ನೆರೆ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ರಚಿಸಲಾದ ತುಂಬೆ ಸಮೂಹದ ಸಿಎಸ್‌ಅರ್‌ನ ಉಪಸಮಿತಿಯು ತುಂಬೆ ಸಮೂಹದ ವಿವಿಧ ಸಂಸ್ಥೆಗಳು ಮತ್ತು ಸಿಬ್ಬಂದಿ ಹಾಗೂ ಇಲಾಖಾ ಮುಖ್ಯಸ್ಥರ ಸ್ವಯಂ ಪ್ರೇರಿತ ದೇಣಿಗೆಯ ನೆರವಿನಿಂದ 1,15,000 ದಿರ್ಹಮ್ (22,70,395 ರೂ.) ಸಂಗ್ರಹಿಸಿತ್ತು.

ಕಾರ್ಯಕ್ರಮದಲ್ಲಿ ಸುಮಾರು 40 ಕುಟುಂಬಗಳು ಆರ್ಥಿಕ ನೆರವನ್ನು ಪಡೆದುಕೊಂಡಿದ್ದು ಇದು ಅವರು ತಮ್ಮ ಜೀವನವನ್ನು ಮರುಸ್ಥಾಪಿಸಲು ನೆರವಾಗ ಲಿದೆ. ಕೊರ್ಪೊರೇಟ್ ಸಾಮಾಜಿಕ ಹೊಣೆಯು ತುಂಬೆ ಸಮೂಹದ ಪೂರ್ಣಕಾಲಿಕ ಚಟುವಟಿಕೆಯಾಗಿದೆ ಎಂದು ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಹಿಯುದ್ದೀನ್ ತಿಳಿಸಿದ್ದಾರೆ.

ಸಮಾಜಕ್ಕೆ ಮರಳಿ ನೀಡುವುದು ನಮ್ಮ ಕೊರ್ಪೊರೇಟ್ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ನಾವು ಪರಿಗಣಿಸಿದ್ದೇವೆ. ಸಂತೋಷ ಮತ್ತು ನೀಡುವ ಸ್ಪೂರ್ತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಸರಕಾರದ ವಿವಿಧ ಯೋಜನೆಗಳಿಗೆ ಬೆಂಬಲ ನೀಡುವ ಉದ್ದೇಶವನ್ನು ನಮ್ಮ ಸಿಎಸ್‌ಆರ್ ಚಟುವಟಿಕೆಗಳು ಹೊಂದಿವೆ ಎಂದು ಅವರು ತಿಳಿಸಿದ್ದಾರೆ.

ಸಿಎಸ್‌ಆರ್ ಸಮಿತಿಯು ತುಂಬೆ ಸಮೂಹದ ಸಿಎಸ್‌ಆರ್ ಚಟುವಟಿಕೆಗಳನ್ನು ನೋಡಿಕೊಳ್ಳುತ್ತದೆ. ಶಿಕ್ಷಣ, ಆರೋಗ್ಯ ಮತ್ತು ಸುರಕ್ಷೆ, ಪರಿಸರ ಮತ್ತು ಸಮುದಾಯ ಕಲ್ಯಾಣ ಸೇರಿದಂತೆ ಜಾಗತಿಕ ವಿಷಯಗಳಿಗೆ ಸಂಬಂಧಿಸಿದಂತೆ ಕಂಪೆನಿಯ ಕೊರ್ಪೊರೇಟ್ ಸಾಮಾಜಿಕ ಹೊಣೆಯ ಬಗ್ಗೆ ಸಮಿತಿಯು ಚರ್ಚೆ ನಡೆಸುತ್ತದೆ ಮತ್ತು ನಿರ್ಧರಿಸುತ್ತದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News