ಯುಎಇಯಲ್ಲಿರುವ ಭಾರತೀಯರಲ್ಲಿ ಡಾ. ತುಂಬೆ ಮೊಯ್ದಿನ್ 7ನೇ ಅತೀ ಶ್ರೀಮಂತ

Update: 2018-10-06 15:40 GMT

ಮುಂಬೈ, ಅ. 6: ಬರ್ಕ್ಲೇಸ್ ಹುರನ್ ಇಂಡಿಯಾ ಶ್ರೀಮಂತರ ಪಟ್ಟಿ 2018ರಲ್ಲಿ ಯುಎಇಯಲ್ಲಿ ನೆಲೆಸಿರುವ ಭಾರತೀಯರಲ್ಲಿ ಏಳನೇ ಅತಿ ಶ್ರೀಮಂತರ ಸ್ಥಾನವನ್ನು ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದಿನ್ ಪಡೆದುಕೊಂಡಿದ್ದಾರೆ.

ದೇಶದ ಒಟ್ಟು 755 ಮಂದಿ ಅತ್ಯಂತ ಶ್ರೀಮಂತರು ಒಳಗೊಂಡಿರುವ ಈ ಪಟ್ಟಿಯಲ್ಲಿ ಡಾ. ತುಂಬೆ ಅವರು 59ನೇ ಸ್ಥಾನ ಪಡೆದುಕೊಂಡಿದ್ದಾರೆ.

ಡಾ. ತುಂಬೆ ಮೊಯ್ದಿನ್ ಅವರ ಒಟ್ಟು ಸಂಪತ್ತು ಸುಮಾರು 14,000 ಕೋಟಿ ರೂ. ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ಯುಎಇಯಲ್ಲಿ ನೆಲೆಸಿರುವ ಅತಿ ಶ್ರೀಮಂತ 21 ಭಾರತೀಯರ ಪೈಕಿ ಡಾ. ತುಂಬೆ ಮೊಯ್ದಿನ್ ಅವರು 7ನೇ ಸ್ಥಾನ ಪಡೆದುಕೊಂಡಿದ್ದಾರೆ.

ನಿವ್ವಳ 1000 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಂಪತ್ತು ಹೊಂದಿರುವ ಭಾರತದ ಶ್ರೀಮಂತ ವ್ಯಕ್ತಿಗಳನ್ನು ಈ ಪಟ್ಟಿ ಒಳಗೊಂಡಿದೆ. ಈ ಪಟ್ಟಿಯ 2018ರ ಆವೃತ್ತಿಯಲ್ಲಿ ಅತಿ ಶ್ರೀಮಂತರ ಸಂಖ್ಯೆ 831ಕ್ಕೆ ಏರಿಕೆಯಾಗಿದೆ.

2017ರಲ್ಲಿ ಈ ಸಂಖ್ಯೆ 617 ಇತ್ತು. ಈ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 7ನೇ ವರ್ಷ ಮೊದಲನೇ ಸ್ಥಾನದಲ್ಲಿ ಇದ್ದಾರೆ. ಅವರ ನಿವ್ವಳ ಸಂಪತ್ತು 3,71,000 ಕೋಟಿ ರೂ.

ಆಸಕ್ತಿಕರ ವಿಚಾರವೆಂದರೆ, ಈ ಪಟ್ಟಿಯಲ್ಲಿರುವ 831 ವ್ಯಕ್ತಿಗಳ ಒಟ್ಟು ಸಂಪತ್ತು ಸುಮಾರು 53,20,600 ಕೋಟಿ ರೂ. ಇದು ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ಯ ಕಾಲು ಭಾಗ. ಈ ಪಟ್ಟಿಯಲ್ಲಿ 233 ಹೆಸರುಗಳಿರುವ ಮುಂಬೈ ಶ್ರೀಮಂತರ ಕೇಂದ್ರವಾಗಿ ಹೊರಹೊಮ್ಮಿದೆ. ಹೊಸದಿಲ್ಲಿ ಹಾಗು ಬೆಂಗಳೂರು ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡಿವೆ.

ತುಂಬೆ ಮೊಯ್ದಿನ್ ಅವರು ಮಂಗಳೂರಿನ ಹಿರಿಯ ಉದ್ಯಮಿ, ಸಾಮಾಜಿಕ ಧುರೀಣ. ತುಂಬೆ ಬಿ ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರ ಸುಪುತ್ರ ಹಾಗು ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News