ಸೌದಿ ರಾಯಭಾರ ಕಚೇರಿಯಲ್ಲೇ ಪತ್ರಕರ್ತ ಜಮಾಲ್ ಹತ್ಯೆ: ಟರ್ಕಿ ಆರೋಪ

Update: 2018-10-07 15:03 GMT

ಇಸ್ತಾನ್ಬುಬುಲ್, ಅ.7: ಸೌದಿ ಅರೇಬಿಯ ಮೂಲದ ಪತ್ರಕರ್ತ ಜಮಾಲ್ ಖಶೋಗಿಯನ್ನು ಕಳೆದ ವಾರ ಇಸ್ತಾನ್ಬುಲ್‌ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಟರ್ಕಿ ಆರೋಪಿಸಿದೆ. ಸೌದಿ ಕಳುಹಿಸಿದ ತಂಡದಿಂದ ಪತ್ರಕರ್ತನನ್ನು ಹತ್ಯೆ ಮಾಡಲಾಗಿದೆ ಎಂದು ಟರ್ಕಿ ಆರೋಪಿಸಿದೆ.

 ಖಶೋಗಿಯನ್ನು ಹತ್ಯೆ ಮಾಡಲು ಸೌದಿಯಿಂದ 15 ಸದಸ್ಯರ ತಂಡ ಆಗಮಿಸಿತ್ತು. ಇದೊಂದು ಪೂರ್ವಯೋಜಿತ ಹತ್ಯೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಖಶೋಗಿ ನಾಪತ್ತೆಯಾಗಿರುವ ಕುರಿತು ತನಿಖೆ ನಡೆಸಲು ಇಸ್ತಾನ್ಬುಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆದೇಶಿಸಿದ್ದಾರೆ ಎಂದು ಟರ್ಕಿಯ ಸುದ್ದಿ ಸಂಸ್ಥೆ ಅನಡೊಲು ವರದಿ ಮಾಡಿದೆ. ಮತ್ತೊಂದೆಡೆ ಖಶೋಗಿ ಸೌದಿ ರಾಯಬಾರ ಕಚೇರಿಯಿಂದ ಹೊರಗೆ ಬಂದೇ ಇಲ್ಲ ಎಂದು ಟರ್ಕಿ ಹೇಳಿಕೊಂಡಿದೆ.

ಟರ್ಕಿ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿರುವ ಸೌದಿ ಅರೇಬಿಯ ವಾಶಿಂಗ್ಟನ್ ಪೋಸ್ಟ್‌ನ ಜಾಗತಿಕ ಅಭಿಪ್ರಾಯ ವಿಭಾಗಕ್ಕೆ ಕೆಲಸ ಮಾಡುತ್ತಿದ್ದ ಖಶೋಗಿಯನ್ನು ಬಂಧನದಲ್ಲಿಡಲಾಗಿದೆ ಎಂಬುದನ್ನು ಅಲ್ಲಗಳೆದಿದೆ. ಒಂದು ವೇಳೆ ಸೌದಿ, ಖಶೋಗಿಯನ್ನು ಹತ್ಯೆ ಮಾಡಿದ್ದರೆ ಅದೊಂದು ರಾಕ್ಷಸೀಯ ಮತ್ತು ಕ್ಷಮಾರ್ಹವಲ್ಲದ ಅಪರಾಧ ಎಂದು ವಾಶಿಂಗ್ಟನ್ ಪೋಸ್ಟ್ ತಿಳಿಸಿದೆ. ಸೌದಿ ಅರೇಬಿಯದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ಕಟು ಟೀಕಾಕಾರರಾಗಿರುವ ಜಮಾಲ್ ಖಶೋಗಿ ಟ್ವಿಟರ್‌ನಲ್ಲಿ 1.6 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಟರ್ಕಿ ಮೂಲದ ಹಟಿಸ್ ಸೆಂಗಿಝ್ ಎಂಬಾಕೆಯನ್ನು ವಿವಾಹವಾಗುವ ಸಲುವಾಗಿ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದ ಪ್ರಮಾಣ ಪತ್ರದ ದಾಖಲೆಗಳನ್ನು ಪಡೆಯಲು ಅವರು ಮಂಗಳವಾರ ಸೌದಿ ರಾಯಭಾರ ಕಚೇರಿಗೆ ತೆರಳಿದ್ದರು. ಕಚೇರಿಯ ಹೊರಗೆ ನಾನು ಹನ್ನೊಂದು ಗಂಟೆಗಳ ಕಾಲ ಕಶೋಗಿಗಾಗಿ ಕಾದು ಕುಳಿತಿದ್ದೆ. ಆದರೆ ಅವರು ಬರಲೇ ಇಲ್ಲ ಎಂದು ಸಿಂಗಿಝ್ ತಿಳಿಸಿದ್ದಾರೆ.

ಸೌದಿ ಹೇಳಿಕೆ:

ನಮ್ಮಲ್ಲಿ ಮುಚ್ಚಿಡಲು ಏನೂ ಇಲ್ಲ, ಹಾಗಾಗಿ ಟರ್ಕಿಯ ಅಧಿಕಾರಿಗಳು ಇಲ್ಲಿಗಾಗಮಿಸಿ ನಮ್ಮ ಕಟ್ಟಡದಲ್ಲಿ ಹುಡುಕಾಟ ನಡೆಸಬಹುದು ಎಂದು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಬುಧವಾರ ತಿಳಿಸಿದ್ದಾರೆ.

ಖಶೋಗಿಗೆ ಏನಾಯಿತು ಎಂಬುದನ್ನು ತಿಳಿಯಲು ಸೌದಿ ಕೂಡಾ ಉತ್ಸುಕವಾಗಿದೆ ಎಂದು ತಿಳಿಸಿರುವ ರಾಜಕುಮಾರ, ಖಶೋಗಿ ನಮ್ಮ ರಾಯಭಾರ ಕಚೇರಿಗೆ ಆಗಮಿಸಿದ ಐದು ನಿಮಿಷದಿಂದ ಒಂದು ಗಂಟೆಯ ಒಳಗೆ ಹೊರಗೆ ಹೋಗಿದ್ದರು ಎಂದು ನನಗೆ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News