ಯುಎಇ: ಸುಳ್ಳು ಸುದ್ದಿ ಹರಡಿದಲ್ಲಿ 1 ದಶಲಕ್ಷ ದಿರ್ಹಂ ದಂಡ

Update: 2018-10-14 16:35 GMT

  ದುಬೈ,ನ.14: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಾಗೂ ವದಂತಿ ಗಳನ್ನು ಹರಡುವವರಿಗೆ 1 ದಶಲಕ್ಷ ದಿರ್ಹಂವರೆಗೂ ದಂಡವಿಧಿಸಲಾಗುವುದೆಂದು ದುಬೈ ಪೊಲೀಸರು ರವಿವಾರ ಎಚ್ಚರಿಕೆ ನೀಡಿದ್ದಾರೆ.

ಸುಳ್ಳುಸುದ್ದಿ ಹಾಗೂ ವದಂತಿಗಳ ಹರಡುವಿಕೆಯ ವಿರುದ್ಧ ಜನಜಾಗೃತಿ ಅಭಿಯಾನವನ್ನು ದುಬೈ ಪೊಲೀಸ್ ಇಲಾಖೆ ಚುರುಕುಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುವ ಸುಳ್ಳು ಸುದ್ದಿಗಳ ಕುರಿತು ನಾಗರಿಕರನ್ನು ಎಚ್ಚರಿಸಲು ದುಬೈ ಪೊಲೀಸ್ ಇಲಾಖೆಯ ಅಲ್‌ಅಮೀನ್ ಸರ್ವಿಸ್ ಚರ್ಚಾಗೋಷ್ಠಿಯೊಂದನ್ನು ರವಿವಾರ ಆಯೋಜಿಸಿತ್ತು.

ಚರ್ಚಾಗೋಷ್ಠಿಯಲ್ಲಿ ಅಲ್‌ಅಮೀನ್ ಸರ್ವಿಸ್‌ನ ಜಮಾಲ್ ಅಹ್ಮದ್ ಮಾತನಾಡಿ, ಸುಳ್ಳುಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಇದಕ್ಕಾಗಿ 1 ದಶಲಕ್ಷ ದಿರ್ಹಂವರೆಗೂ ದಂಡ ತೆರಬೇಕಾಗಬಹುದು ಎಂದು ಎಚ್ಚರಿಸಿದರು.

ಬಹುತೇಕ ಸುಳ್ಳುಸುದ್ದಿಗಳು ಹಾಗೂ ವದಂತಿಗಳು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫಾಲೋವರ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಬಯಸುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಹರಡಲ್ಪಡುತ್ತವೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News