ಸೌದಿಗೆ ಶಸ್ತ್ರಾಸ್ತ್ರ ಮಾರಾಟ ರದ್ದುಪಡಿಸಿದರೆ ನಮಗೆ ನಾವೇ ಶಿಕ್ಷೆ ನೀಡಿದಂತಾಗುತ್ತದೆ: ಟ್ರಂಪ್

Update: 2018-10-14 16:56 GMT

ವಾಶಿಂಗ್ಟನ್,ಅ.14: ಒಂದು ವೇಳೆ ಸೌದಿ ಪತ್ರಕರ್ತ ಜಮಾಲ್ ಖಶೋಗಿಯವರನ್ನು ಇಸ್ತಾಂಬುಲ್‌ನಲ್ಲಿರುವ ಸೌದಿ ರಾಯಭಾರಿ ಕಚೇರಿಯಲ್ಲಿ ಹತ್ಯೆಗೈಯಲಾಗಿದೆಯೆಂಬುದು ಸಾಬೀತಾದರೂ, ಅಮೆರಿಕವು ರಿಯಾದ್‌ಗೆ 110 ಶತಕೋಟಿ ಡಾಲರ್ ಮೌಲ್ಯದ ಮಿಲಿಟರಿ ಸಾಮಾಗ್ರಿಗಳ ಮಾರಾಟವನ್ನು ಸ್ಥಗಿತಗೊಳಿಸಿದಲ್ಲಿ ಅದು ತನ್ನನ್ನು ತಾನೇ ‘ಶಿಕ್ಷಿಸಿಕೊಂಡಂತಾದೀತು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.

ಸೌದಿಯ ಹಾಲಿ ಪ್ರಭುತ್ವದ ಟೀಕಾಕಾರ ಹಾಗೂ ಅಮೆರಿಕದ ನಿವಾಸಿಯಾದ ಖಶೋಗಿ ಅವರು ಅಕ್ಟೋಬರ್ 2ರಂದು ಸೌದಿ ರಾಯಭಾರಿ ಕಚೇರಿಗೆ ಭೇಟಿ ನೀಡಿದ ಆನಂತರ ನಿಗೂಢವಾಗಿ ನಾಪತ್ತೆಯಾಗಿದ್ದರು. ಖಶೋಗಿ ಅವರನ್ನು ಸೌದಿ ರಾಯಭಾರಿ ಕಚೇರಿಯ ಒಳಗಡೆಯೇ ಹತ್ಯೆಗೈಯಲಾಗಿದ್ದು ಹಾಗೂ ಅವರ ಮೃತದೇಹವನ್ನು ಸೌದಿ ಅಧಿಕಾರಿಗಳು ಬೇರೆಡೆಗೆ ಸಾಗಿಸಲಾಗಿದೆಯೆಂದು ಟರ್ಕಿ ಸರಕಾರವು ಆರೋಪಿಸಿದೆ.

 ಶ್ವೇತಭವನದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಟ್ರಂಪ್ ಅವರು ಖಶೋಗಿ ಪ್ರಕರಣಕ್ಕೆ ಸಂಬಂಧಿಸಿ ರಿಯಾದ್‌ಗೆ ಮಿಲಿಟರಿ ಸಾಮಾಗ್ರಿಗಳ ಮಾರಾಟವನ್ನು ನಿಲ್ಲಿಸಿದಲ್ಲಿ ನಮಗೆ ನಾವೇ ಶಿಕ್ಷೆ ವಿಧಿಸಿದಂತಾಗಲಿದೆ ಎಂದು ಹೇಳಿದರು.

‘‘ಅದರ ಬದಲಾಗಿ ಇತರ ಅತ್ಯಂತ ಶಕ್ತಿಶಾಲಿ ಮತ್ತು ಬಲಿಷ್ಠವಾದ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.ನಾವು ಹಾಗೆ ಮಾಡಲಿದ್ದೇವೆ’’ ಎಂದು ಟ್ರಂಪ್ ಹೇಳಿದ್ದಾರೆ.

ಖಶೋಗಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಸೌದಿ ಆಡಳಿತದ ವಿರುದ್ಧ ದೃಢವಾದ ಕ್ರಮವನ್ನು ಕೈಗೊಳ್ಳಬೇಕೆಂದು ರಿಪಬ್ಲಿಕನ್ ಹಾಗೂ ಡೆಮಾಕ್ರಾಟಿಕ್ ಸಂಸದರು ಆಗ್ರಹಿಸಿದ್ದಾರೆ. ಯಮನ್‌ನಲ್ಲಿ ಸೌದಿ ನೇತೃತ್ವದ ಮಿತ್ರಪಡೆಗಳು ನಡೆಸುತ್ತಿರುವ ವಾಯುದಾಳಿಯಲ್ಲಿ ಭಾರೀ ಸಂಖ್ಯೆಯ ನಾಗರಿಕರು ಸಾವನ್ನಪ್ಪಿರುವ ಬಗ್ಗೆಯೂ ಭಾರೀ ಆತಂಕ ವ್ಯಕ್ತವಾಗಿದೆ. ಒಂದು ವೇಳೆ ಖಶೋಗಿ ನಾಪತ್ತೆಗೆ ಸಂಬಂಧಿಸಿ ಸೌದಿ ವಿರುದ್ಧ ಹೊರಿಸಲಾದ ಆರೋಪಗಳು ಸಾಬೀತಾದಲ್ಲಿ ಆ ದೇಶಕ್ಕೆ ಮಿಲಿಟರಿ ಸಾಮಾಗ್ರಿಗಳ ಮಾರಾಟವನ್ನು ರದ್ದುಪಡಿಸಬೇಕೆಂದು ಅಮೆರಿಕದ ಸಂಸದರು ಆಗ್ರಹಿಸಿದ್ದಾರೆ.

 ಖಶೋಗಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ತಾನು ಸೌದಿ ದೊರೆ ಸಲ್ಮಾನ್ ಜೊತೆ ಮಾತುಕತೆ ನಡೆಸುವುದಾಗಿಯೂ ಟ್ರಂಪ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News