ಸೌದಿ ಎಚ್ಚರಿಕೆಗೆ ತೈಲ ಮಾರುಕಟ್ಟೆ ತಲ್ಲಣ

Update: 2018-10-15 16:42 GMT

ಲಂಡನ್, ಅ. 15: ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನಗಳ ಹಿನ್ನೆಲೆಯಲ್ಲಿ ಈಗಾಗಲೇ ಅಸ್ತವ್ಯಸ್ತಗೊಂಡಿರುವ ಜಾಗತಿಕ ತೈಲ ಮಾರುಕಟ್ಟೆಯು, ಸೌದಿ ಅರೇಬಿಯವನ್ನು ಅಮೆರಿಕ ದಂಡಿಸುವ ಸಾಧ್ಯತೆಯಿಂದ ಮತ್ತಷ್ಟು ತಲ್ಲಣಿಸಿದೆ.

ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ನಾಪತ್ತೆಯ ಬಳಿಕ ನಮ್ಮನ್ನು ಯಾರಾದರೂ ದಂಡಿಸಿದರೆ ಅದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಸೌದಿ ಅರೇಬಿಯ ಈಗಾಗಲೇ ಎಚ್ಚರಿಕೆ ನೀಡಿದೆ.

ಜಗತ್ತಿನ ಅತಿ ದೊಡ್ಡ ತೈಲ ಪೂರೈಕೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಬಹುದು ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ಸಂಭವಿಸಿವೆ.

ನಮ್ಮ ವಿರುದ್ಧ ಯಾರಾದರೂ ಕ್ರಮ ತೆಗೆದುಕೊಂಡರೆ ಅದಕ್ಕೆ ಪ್ರತೀಕಾರ ತೆಗೆದುಕೊಳ್ಳುವೆವು ಹಾಗೂ ಜಾಗತಿಕ ಆರ್ಥಿಕತೆಯಲ್ಲಿ ನಮಗೆ ಪ್ರಭಾವಿ ಹಾಗೂ ಮಹತ್ವದ ಪಾತ್ರವಿದೆ ಎಂಬುದಾಗಿ ಸೌದಿ ಅರೇಬಿಯ ಹೇಳಿದ ಬಳಿಕ, ಜಾಗತಿಕ ಕಚ್ಚಾತೈಲ ಬೆಲೆಯಲ್ಲಿ 2 ಶೇಕಡ ಏರಿಕೆಯಾಗಿದೆ.

‘ಸೌದಿ ಅರೇಬಿಯದ ಪ್ರತೀಕಾರದಿಂದ ಹಾಹಾಕಾರ’

ಸೌದಿ ಅರೇಬಿಯವು ತೈಲದ ಮೂಲಕ ಪ್ರತೀಕಾರ ತೆಗೆದುಕೊಂಡರೆ, ಏಶ್ಯದಲ್ಲಿ ಹಾಹಾಕಾರ ಸಂಭವಿಸುತ್ತದೆ ಎಂದು ಓಂಡ ಕಾರ್ಪ್‌ನಲ್ಲಿ ಏಶ್ಯ ಪೆಸಿಫಿಕ್ ಟ್ರೇಡಿಂಗ್ ಮುಖ್ಯಸ್ಥ ಸ್ಟೀಫನ್ ಇನ್ಸ್ ಹೇಳುತ್ತಾರೆ.

‘‘ಇದು ಜಾಗತಿಕ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸುತ್ತದೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘‘ಆದಾಗ್ಯೂ, ಇಂಥ ಕ್ರಮಗಳು ರಾಜಕೀಯ ಜಾಣ್ಮೆಯ ಕ್ರಮವಾಗಿರುವುದಿಲ್ಲ. ಈ ಮೂಲಕ ಸೌದಿ ಅರೇಬಿಯವು ತನ್ನನ್ನು ತಾನೇ ಘಾಸಿಗೊಳಿಸುತ್ತದೆ’’ ಎಂಬುದಾಗಿಯೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News