ಸೌದಿ ಅರೇಬಿಯಾ: ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಮಿಂಚುತ್ತಿರುವ ಬಂಟ್ವಾಳದ ಯುವಕ ಶಂಸುದ್ದೀನ್

Update: 2018-10-16 17:32 GMT

ಮಂಗಳೂರು, ಅ.16: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಟಿಪ್ಪು ನಗರದ ಯುವಕನೋರ್ವ ಸೌದಿ ಅರೇಬಿಯಾದಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವರ ಹೆಸರು ಅಹ್ಮದ್ ಶಂಸುದ್ದೀನ್.

ಸೌದಿಯ ಜೆದ್ದಾದಲ್ಲಿ ಉದ್ಯೋಗದಲ್ಲಿರುವ ಅವರು ಹಲವು ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸಿದ್ದರು. ಸಣ್ಣ ವಯಸ್ಸಿನಿಂದಲೂ ಕ್ರಿಕೆಟ್ ನಲ್ಲಿ ಇವರಿಗೆ ಅಪಾರ ಆಸಕ್ತಿ. ಆದರೆ ಉದ್ಯೋಗದ ಕಾರಣ ವಿದೇಶಕ್ಕೆ ತೆರಳಬೇಕಾಯಿತು. ಅದೃಷ್ಟವಶಾತ್ ಅಲ್ಲೂ ಅವರಿಗೆ ತನ್ನ ನೆಚ್ಚಿನ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತು.

ಬಂಟ್ವಾಳದ ಟಿಪ್ಪು ನಗರ ನಿವಾಸಿಯಾಗಿರುವ ಶಂಸುದ್ದೀನ್ ಎಸ್ ವಿಎಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. “ಏಶಿಯನ್ ಕ್ರಿಕೆಟ್ ಕೌನ್ಸಿಲ್ ಪಂದ್ಯಾಟಗಳು ಜನವರಿ ಹಾಗು ಫೆಬ್ರವರಿ ತಿಂಗಳಲ್ಲಿ ನಡೆಯುತ್ತದೆ. ಲೀಗ್ ನಲ್ಲಿ ಬಹರೈನ್, ಕುವೈಟ್, ಮಾಲ್ಡೀವ್ಸ್ ಮೊದಲಾದ ತಂಡಗಳು ಭಾಗವಹಿಸಲಿವೆ. ಈ ಬಾರಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸುವ ತಂಡದಲ್ಲಿ ನನಗೂ ಸ್ಥಾನ ಲಭಿಸಿದೆ. ನಮ್ಮ ತಂಡದಲ್ಲಿ ನಾನು ಹಾಗು ಕೇರಳದ ಯುವಕ ಮಾತ್ರ ಭಾರತೀಯರು. ಮತ್ತೆಲ್ಲರೂ ಪಾಕಿಸ್ತಾನಿಯರು. ಇಲ್ಲಿ ನಮ್ಮ ತಂಡ ಜಯಗಳಿಸಿದರೆ ಡಿವಿಶನ್ 2ರಲ್ಲಿ ಕೆನ್ಯಾ ಮತ್ತು ಯುಎಇ ತಂಡದೊಂದಿಗೆ ನಾವು ಸೆಣಸಲಿದ್ದೇವೆ” ಎಂದವರು ಹೇಳುತ್ತಾರೆ.

ಒಟ್ಟಿನಲ್ಲಿ ಗ್ರಾಮೀಣ ಪ್ರತಿಭೆಯೊಬ್ಬ ಸೌದಿ ಅರೇಬಿಯಾದಲ್ಲಿ ಎಲ್ಲರೂ ಮೆಚ್ಚುವ ಸಾಧನೆ ಮಾಡಿರುವುದು ಪ್ರಶಂಸನೀಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News