ತುಂಬೆ ಬಿಲ್ಡರ್ಸ್‌ಗೆ ‘ಹೆಲ್ತ್‌ಕೇರ್ ಪ್ರಾಜೆಕ್ಟ್ ಆಫ್ ದಿ ಇಯರ್’ ಪುರಸ್ಕಾರ

Update: 2018-10-20 17:40 GMT

ದುಬೈ, ಅ.20: ದುಬೈಯಲ್ಲಿ ಅ. 17ರಂದು ನಡೆದ ಮೂರನೇ ವಾರ್ಷಿಕ ‘ನಿರ್ಮಾಣ ನಾವೀನ್ಯತೆ ಪುರಸ್ಕಾರ 2018’ ಸಮಾರಂಭದಲ್ಲಿ ಪ್ರತಿಷ್ಠಿತ ಮತ್ತು ಬೃಹತ್ ನಿರ್ಮಾಣ ಸಂಸ್ಥೆಯಾಗಿರುವ ತುಂಬೆ ಬಿಲ್ಡರ್ಸ್‌ಗೆ ‘ವರ್ಷದ ಅತ್ಯಂತ ಶ್ರೇಷ್ಠ ಆರೋಗ್ಯ ಯೋಜನೆ’(ಹೆಲ್ತ್‌ಕೇರ್ ಪ್ರಾಜೆಕ್ಟ್ ಆಫ್ ದಿ ಇಯರ್) ಪುರಸ್ಕಾರ ಪ್ರದಾನ ಮಾಡಲಾಯಿತು.

‘ಕನ್‌ಸ್ಟ್ರಕ್ಷನ್ ಬಿಸಿನೆಸ್ ನ್ಯೂಸ್’ ಪತ್ರಿಕೆಯನ್ನು ಪ್ರಕಟಿಸುತ್ತಿರುವ ಬಿಎನ್‌ಸಿ ಪಬ್ಲಿಶರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಂಬೆ ಸಮೂಹ ಸಂಸ್ಥೆಯ ನಿರ್ದೇಶಕ (ನಿರ್ಮಾಣ ಮತ್ತು ನವೀಕರಣ ವಿಭಾಗ) ಅಕ್ರಮ್ ಮೊಯ್ದಿನ್ ತುಂಬೆ , ತುಂಬೆ ಬಿಲ್ಡರ್ಸ್‌ನ ಸಿಒಒ ಫರ್ವಾಝ್ ಪಿ.ಸಿ. ಪ್ರಶಸ್ತಿಯನ್ನು ಸ್ವೀಕರಿಸಿದರು.

ತುಂಬೆ ಮೆಡಿಸಿಟಿಯಲ್ಲಿ ಇತ್ತೀಚೆಗೆ ಆರಂಭಗೊಂಡ ಎರಡು ಅತ್ಯಾಧುನಿಕ ಆರೋಗ್ಯ ಕ್ಷೇತ್ರದ ಸಂಸ್ಥೆಗಳಾದ ತುಂಬೆ ಫಿಸಿಕಲ್ ಥೆರಪಿ ಆ್ಯಂಡ್ ರಿಹ್ಯಾಬಿಲಿಟೇಷನ್ ಹಾಸ್ಪಿಟಲ್ ಹಾಗೂ ತುಂಬೆ ಡೆಂಟಲ್ ಹಾಸ್ಪಿಟಲ್‌ನ ವ್ಯವಸ್ಥೆಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.

ತುಂಬೆ ಬಿಲ್ಡರ್ಸ್‌ಗೆ ವಿಶ್ವದರ್ಜೆಯ ಆರೋಗ್ಯ ವ್ಯವಸ್ಥೆಯ ನಿರ್ಮಾಣ ಕ್ಷೇತ್ರದಲ್ಲಿರುವ ಖ್ಯಾತಿಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಂಪನ್ಮೂಲಗಳನ್ನು ದಕ್ಷತೆಯಿಂದ ಬಳಸಿಕೊಂಡು ಗ್ರಾಹಕರಿಗೆ ತೃಪ್ತಿಯಾಗುವ ಸೇವೆ ಸಲ್ಲಿಸುವ ಸಂಸ್ಥೆ ಯುಎಇ ಹಾಗೂ ಭಾರತದಲ್ಲಿ ಆರೋಗ್ಯ ಕ್ಷೇತ್ರ, ಶಿಕ್ಷಣ, ಆತಿಥ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಉನ್ನತ ಮಟ್ಟದ ನಿರ್ಮಾಣ ಯೋಜನೆಗಳನ್ನು ಸಮರ್ಪಿಸಿದೆ ಎಂದು ಪ್ರಶಸ್ತಿ ಸ್ವೀಕರಿಸಿದ ಅಕ್ರಮ್ ಮೊಯ್ದಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News