ಖಶೋಗಿಯನ್ನು ಸೌದಿ ಏಜಂಟ್‌ಗಳು ಕಾನ್ಸುಲೇಟ್‌ನಲ್ಲಿ ಉಸಿರುಗಟ್ಟಿಸಿ ಕೊಂದರು

Update: 2018-10-21 16:46 GMT

ರಿಯಾದ್, ಅ. 21: ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್‌ನಲ್ಲಿ ಪತ್ರಕರ್ತ ಜಮಾಲ್ ಖಶೋಗಿಯ ಸಾವಿನ ಬಗ್ಗೆ ಸೌದಿ ಅರೇಬಿಯ ನೀಡಿರುವ ವಿವರಣೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಂದೇಹಗಳು ವ್ಯಕ್ತವಾಗುತ್ತಿರುವಂತೆಯೇ, ದೇಶದ ಹಿರಿಯ ಅಧಿಕಾರಿಯೊಬ್ಬರು ಈ ಸಾವಿಗೆ ಹೊಸ ವಿವರಣೆಯೊಂದನ್ನು ನೀಡಿದ್ದಾರೆ. ಈ ವಿವರಣೆಯು ಹಲವು ಸಂದರ್ಭಗಳಲ್ಲಿ ಹಿಂದಿನ ವಿವರಣೆಗಳಿಗೆ ವ್ಯತಿರಿಕ್ತವಾಗಿದೆ.

ಖಶೋಗಿಯನ್ನು ನಿಭಾಯಿಸಲು ಅಕ್ಟೋಬರ್ 2ರಂದು ಸೌದಿ ಅರೇಬಿಯ ಕಳುಹಿಸಿದ 15 ಸೌದಿ ರಾಷ್ಟ್ರೀಯರ ತಂಡವು, ಮತ್ತು ಭರಿಸುವ ಔಷಧ ನೀಡಿ ಅಪಹರಿಸುವುದಾಗಿ ಖಶೋಗಿಯನ್ನು ಬೆದರಿಸಿತು ಎಂಬುದಾಗಿ ಈ ಅಧಿಕಾರಿ ಹೇಳಿದ್ದಾರೆ.

ಅದನ್ನು ಖಶೋಗಿ ವಿರೋಧಿಸಿದಾಗ ಅವರನ್ನು ಉಸಿರುಗಟ್ಟಿಸಿ ಕೊಲ್ಲಲಾಯಿತು ಎಂದು ಅವರು ತಿಳಿಸಿದ್ದಾರೆ.

ಬಳಿಕ, ಖಶೋಗಿ ಕೌನ್ಸುಲೇಟ್ ಕಚೇರಿಯಿಂದ ಹೊರಗೆ ಹೋಗಿದ್ದಾರೆ ಎಂಬಂತೆ ಕಾಣಲು, ತಂಡದ ಓರ್ವ ಸದಸ್ಯನು ಅವರ ಬಟ್ಟೆಗಳನ್ನು ಧರಿಸಿ ಹೊರಗೆ ನಡೆದುಕೊಂಡು ಹೋದನು ಎಂದು ಅವರು ಹೇಳಿದ್ದಾರೆ.

59 ವರ್ಷದ ಖಶೋಗಿಯ ನಾಪತ್ತೆ ಬಗ್ಗೆ ತನಗೇನೂ ತಿಳಿದಿಲ್ಲ ಎಂದು ಎರಡು ವಾರಗಳ ಕಾಲ ಹೇಳುತ್ತಾ ಬಂದಿದ್ದ ಸೌದಿ ಅರೇಬಿಯವು, ಕೌನ್ಸುಲೇಟ್‌ನಲ್ಲಿ ನಡೆದ ‘ಮುಷ್ಟಿ ಕಾಳಗ’ದಲ್ಲಿ ಖಶೋಗಿ ಮೃತಪಟ್ಟಿದ್ದಾರೆ ಎಂಬುದಾಗಿ ಶನಿವಾರ ಬೆಳಗ್ಗೆ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಒಂದು ಗಂಟೆ ಬಳಿಕ ಇನ್ನೋರ್ವ ಸೌದಿ ಅಧಿಕಾರಿಯು, ಉಸಿರುಗಟ್ಟಿದ್ದರಿಂದ ಖಶೋಗಿಯ ಸಾವು ಸಂಭವಿಸಿದೆ ಎಂದು ಹೇಳಿದ್ದರು.

ಈಗ ಈ ಹಿರಿಯ ಅಧಿಕಾರಿ ಅದೇ ಸಿದ್ಧಾಂತವನ್ನು ಪುನರುಚ್ಚರಿಸಿದ್ದಾರೆ.

ಖಶೋಗಿಯ ದೇಹವನ್ನು ತುಂಡು ತುಂಡು ಮಾಡಲಾಗಿದೆ ಎಂಬುದಾಗಿ ಟರ್ಕಿ ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ವಿಲೇವಾರಿ ಮಾಡುವುದಕ್ಕಾಗಿ ದೇಹವನ್ನು ಬಟ್ಟೆಯಲ್ಲಿ ಸುತ್ತಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ನೀಡಲಾಯಿತು ಎಂದು ಸೌದಿ ಅಧಿಕಾರಿ ಹೇಳುತ್ತಾರೆ.

ಖಶೋಗಿಗೆ ಚಿತ್ರಹಿಂಸೆ ನೀಡಿ ತಲೆಕಡಿಯಲಾಯಿತು ಎಂಬ ಆರೋಪಗಳ ಬಗ್ಗೆ ಕೇಳಿದಾಗ, ಪ್ರಾಥಮಿಕ ತನಿಖೆಯಲ್ಲಿ ಅದು ಸಾಬೀತಾಗಿಲ್ಲ ಎಂದರು.

ನಿರಂತರ ಬದಲಾದ ಸೌದಿ ಹೇಳಿಕೆ

ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯದ ಹೇಳಿಕೆಯು ನಿರಂತರವಾಗಿ ಬದಲಾಗುತ್ತಾ ಬಂದಿದೆ.

ಆರಂಭದಲ್ಲಿ, ಕೌನ್ಸುಲೇಟ್ ಕಚೇರಿಗೆ ಬಂದಿದ್ದ ಖಶೋಗಿ ನಾಪತ್ತೆಯಾಗಿದ್ದಾರೆ ಎಂಬ ವರದಿಗಳನ್ನು ಸೌದಿ ಅಧಿಕಾರಿಗಳು ನಿರಾಕರಿಸಿದ್ದರು. ಕಚೇರಿಗೆ ಬಂದ ಸ್ವಲ್ಪವೇ ಹೊತ್ತಿನಲ್ಲಿ ಅವರು ಹೋಗಿದ್ದಾರೆ ಎಂದು ಹೇಳಿದ್ದರು.

ಕೌನ್ಸುಲೇಟ್‌ನಲ್ಲಿ ಪತ್ರಕರ್ತನನ್ನು ಕೊಲ್ಲಲಾಗಿದೆ ಎಂಬ ವರದಿಗಳು ಕೆಲವು ದಿನಗಳ ಬಳಿಕ ಪ್ರಕಟವಾದಾಗ, ಈ ಆರೋಪಗಳು ‘ಆಧಾರರಹಿತ’ ಎಂಬುದಾಗಿ ಅವರು ಹೇಳಿದ್ದರು.

ಖಶೋಗಿ ಸಾವಿನ ಕುರಿತ ಸೌದಿ ಸರಕಾರದ ಹೇಳಿಕೆಗಳು ಯಾಕೆ ನಿರಂತರವಾಗಿ ಬದಲಾದವು ಎಂಬ ‘ರಾಯ್ಟರ್ಸ್’ ಪ್ರಶ್ನೆಗೆ, ‘‘ಸರಕಾರದ ಆರಂಭಿಕ ಹೇಳಿಕೆಯು ಆ ಸಮಯದಲ್ಲಿ ಆಂತರಿಕವಾಗಿ ಲಭಿಸಿದ ತಪ್ಪು ಮಾಹಿತಿಯನ್ನು ಆಧರಿಸಿತ್ತು’’ ಎಂದು ಸೌದಿ ಅಧಿಕಾರಿ ಉತ್ತರಿಸಿದರು.

‘‘ಈ ಆರಂಭಿಕ ಮಾಹಿತಿಗಳು ತಪ್ಪು ಎನ್ನುವುದು ಸ್ಪಷ್ಟವಾದ ಬಳಿಕ, ಸೌದಿ ಅರೇಬಿಯವು ಆಂತರಿಕ ತನಿಖೆಗೆ ಆದೇಶಿಸಿತು ಹಾಗೂ ಹೊಸದಾಗಿ ಸಾರ್ವಜನಿಕ ಹೇಳಿಕೆ ನೀಡುವುದನ್ನು ನಿಲ್ಲಿಸಿತು’’ ಎಂದರು.

ಪ್ರಕರಣದ ಬುಡಕ್ಕೆ ಹೋಗುತ್ತೇವೆ: ಟ್ರಂಪ್

ಸೌದಿ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಎಲ್ಲ ವಿವರಗಳನ್ನು ನಾವು ಬಯಲಿಗೆಳೆಯುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, ಸೌದಿ ಅರೇಬಿಯದೊಂದಿಗಿನ ಶಸ್ತ್ರಾಸ್ತ್ರ ವ್ಯವಹಾರವನ್ನು ರದ್ದುಪಡಿಸುವುದಿಲ್ಲ ಎಂದಿದ್ದಾರೆ.

‘‘ಇದು ನಾವು ಇಷ್ಟ ಪಡುವಂಥಾದ್ದಲ್ಲ. ಇದು ಅತ್ಯಂತ ಗಂಭೀರ ವಿಷಯ. ನಾವು ಪ್ರಕರಣದ ಬುಡಕ್ಕೆ ಹೋಗುತ್ತೇವೆ’’ ಎಂದು ಅಮೆರಿಕದ ನೆವಾಡ ರಾಜ್ಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News