×
Ad

ಖಶೋಗಿಗೆ ಅಂತಿಮ ಸಂದೇಶ ಬರೆದ ಗೆಳತಿ ಹೇಳಿದ್ದೇನು?

Update: 2018-10-22 21:00 IST

ಅಂಕಾರ, ಅ. 22: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್‌ನಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ಸೌದಿ ಅರೇಬಿಯ ಒಪ್ಪಿಕೊಂಡ ಬಳಿಕ, ಅವರನ್ನು ಮದುವೆಯಾಗಲಿದ್ದ ಟರ್ಕಿಯ ಮಹಿಳೆ ಅವರಿಗಾಗಿ ಅಂತಿಮ ಸಂದೇಶವೊಂದನ್ನು ಬರೆದಿದ್ದಾರೆ ಎಂದು ಮಾಧ್ಯಮಗಳು ರವಿವಾರ ವರದಿ ಮಾಡಿವೆ.

 ‘‘ನಿಮ್ಮ ಭೌತಿಕ ಉಪಸ್ಥಿತಿಯನ್ನು ಅವರು ನನ್ನ ಜಗತ್ತಿನಿಂದ ಕಸಿದುಕೊಂಡರು. ಆದರೆ, ನಿಮ್ಮ ಸುಂದರ ನಗು ನನ್ನ ಆತ್ಮದಲ್ಲಿ ಎಂದೆಂದಿಗೂ ಉಳಿಯುವುದು. ನನ್ನ ಪ್ರೀತಿಯ ಖಶೋಗಿ’’ ಎಂದು ಸೆಂಗಿಝ್ ಶನಿವಾರ ಸಂಜೆ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಟ್ವೀಟ್ ಜೊತೆಗೆ ಖಶೋಗಿ ಟಿವಿ ಸಾಕ್ಷಚಿತ್ರವೊಂದಕ್ಕೆ ಸಂದರ್ಶನ ನೀಡುತ್ತಿರುವ ವೀಡಿಯೊವೊಂದನ್ನು ಲಗತ್ತಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಅಕ್ಟೋಬರ್ 2ರಂದು ತನ್ನ ವಿವಾಹ ವಿಚ್ಛೇದನದ ದಾಖಲೆ ಪತ್ರಗಳನ್ನು ತರಲು ಸೌದಿ ಕೌನ್ಸುಲೇಟ್‌ನ ಒಳಗೆ ಜಮಾಲ್ ಹೋಗಿದ್ದಾಗ, ಸೆಂಗಿಝ್ ಹೊರಗೆ ಕಾಯುತ್ತಿದ್ದರು.

ಅವರಿಗೆ ಈಗ ದಿನದ 24 ಗಂಟೆಯೂ ಪೊಲೀಸ್ ರಕ್ಷಣೆಯನ್ನು ನೀಡಲಾಗಿದೆ.

ಜಮಾಲ್ ಸತ್ತಿದ್ದಾರೆ ಎಂಬುದನ್ನು ಗೆಳತಿ ನಂಬಿರಲಿಲ್ಲ

ಜಮಾಲ್ ಸತ್ತಿದ್ದಾರೆ ಎಂಬುದನ್ನು ಈ ಮೊದಲು ಸೆಂಗಿಝ್ ಒಪ್ಪಿರಲಿಲ್ಲ. ಜಮಾಲ್ ನಾಪತ್ತೆಯಾದ ಒಂದು ದಿನದ ಬಳಿಕ, ಅದೇ ಕೌನ್ಸುಲೇಟ್‌ನ ಹೊರಗೆ ನಿಂತಿದ್ದ ಸೆಂಗಿಝ್, ‘‘ಜಮಾಲ್ ಒಳಗಿದ್ದಾರೆಯೇ ಎನ್ನುವುದು ನನಗೆ ತಿಳಿದಿಲ್ಲ. ಜಮಾಲ್ ಎಲ್ಲಿದ್ದಾರೆ ಎನ್ನುವುದನ್ನು ನಾನು ತಿಳಿಯಬಯಸುತ್ತೇನೆ. ಅವರು ಜಮಾಲ್‌ರನ್ನು ಬಂಧಿಸಿದ್ದಾರೆಯೇ?, ಅಪಹರಿಸಿದ್ದಾರೆಯೇ?, ಜೈಲಿಗೆ ತಳ್ಳಿದ್ದಾರೆಯೇ?’’ ಎಂಬುದಾಗಿ ಸಿಎನ್‌ಎನ್ ಜೊತೆ ಮಾತನಾಡುತ್ತಾ ಹೇಳಿದ್ದರು.

‘‘ಅವರು ಏನು ತಿನ್ನುತ್ತಿದ್ದಾರೆ?, ಅವರು ಏನು ಕುಡಿಯುತ್ತಿದ್ದಾರೆ?, ಅವರನ್ನು ನಡೆಸಿಕೊಳ್ಳುವ ರೀತಿ ಇದೆಯೇ?, ಅವರು ಭಯೋತ್ಪಾದಕನಲ್ಲ. ಅವರೊಬ್ಬ ಪತ್ರಕರ್ತ ಹಾಗೂ ವಿಶ್ಲೇಷಕ’’ ಎಂದು ಹೇಳಿದ್ದರು.

ಖಶೋಗಿ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಕಟು ಟೀಕಾಕಾರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News